
ನವದೆಹಲಿ: ಕೆಂಪುಕೋಟೆ ಬಳಿ ಸೊಮವಾರ ಸಂಭವಿಸಿದ್ದ ಸ್ಫೋಟದಲ್ಲಿ ಬಳಸಲಾದ ಹುಂಡೈ ಐ20 ಕಾರನ್ನು ಪುಲ್ವಾಮಾದ ವೈದ್ಯ ಉಮರ್ ನಬಿ ಎಂಬಾತನೇ ಚಾಲನೆ ಮಾಡುತ್ತಿದ್ದ ಎಂಬುವುದು ದೃಢಪಟ್ಟಿರುವುದಾಗಿ ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.
ಮುಖವಾಡ ಧರಿಸಿದ್ದ ವ್ಯಕ್ತಿ ಕಾರನ್ನು ಚಾಲನೆ ಮಾಡಿದ್ದು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಕಂಡುಬಂದಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಸ್ಫೋಟಕ್ಕೆ ಬಳಸಲಾದ ಕಾರನ್ನು ಚಾಲನೆ ಮಾಡಿದ ವ್ಯಕ್ತಿ ಪುಲ್ವಾಮಾದ ವೈದ್ಯ ಉಮರ್ ನಬಿ ಎಂದು ತನಿಖಾಧಿಕಾರಿಗಳು ಗುರುತಿಸಿದ್ದರು. ಆದರೂ ಅವು ಉಮರ್ ನಬಿ ಅವರದ್ದೇ ಎಂದು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ ನಡೆಸಲಾಗಿದೆ.
ಸ್ಫೋಟಗೊಂಡ ಕಾರಿನಲ್ಲಿ ಶಂಕಿತನ ದೇಹದ ಭಾಗಗಳು ಪತ್ತೆಯಾಗಿದ್ದವು. ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪುಲ್ವಾಮಾದಲ್ಲಿರುವ ಡಾ. ನಬಿ ಅವರ ತಾಯಿಯಿಂದ ಡಿಎನ್ಎ ಮಾದರಿಗಳನ್ನು ಮಂಗಳವಾರ ಸಂಗ್ರಹಿಸಿದ್ದರು.
ಸ್ಫೋಟದ ಸ್ಥಳದಿಂದ ಸಂಗ್ರಹಿಸಲಾದ ಡಿಎನ್‌ಎ ಮಾದರಿಗಳನ್ನು ಅವರ ತಾಯಿಯ ಡಿಎನ್‌ಎ ಮಾದರಿಗಳೊಂದಿಗೆ ಹೋಲಿಕೆ ಮಾಡಲಾಗಿದೆ. ಕಾರನ್ನು ಡಾ.ಉಮರ್ ನಬಿ ಚಾಲನೆ ಮಾಡುತ್ತಿದ್ದರು ಎಂಬುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಂಪು ಕೋಟೆಯ ಬಳಿ ಸೋಮವಾರ ಸಂಭವಿಸಿದ್ದ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದರು. ಉಮರ್ ನಬಿ ಫರೀದಾಬಾದ್‌ನಲ್ಲಿ ಪತ್ತೆಯಾದ ಭಯೋತ್ಪಾದಕರ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಆರೋಪವನ್ನು ಆತನ ಕುಟುಂಬ ಸದಸ್ಯರು ತಳ್ಳಿ ಹಾಕಿದ್ದಾರೆ.
ಫರೀದಾಬಾದ್‌ನಲ್ಲಿ 360 ಕೆ.ಜಿ ಅಮೋನಿಯಂ ನೈಟ್ರೇಟ್ ಸೇರಿದಂತೆ 2,900 ಕೆ.ಜಿ ಸ್ಫೋಟಕಗಳನ್ನು ಸೋಮವಾರ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೂ ಸ್ಫೋಟ ಘಟನೆಗೂ ಸಂಬಂಧವಿರುವುದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಉಮರ್ ನಬಿ ಬದರ್‌ಪುರ ಮೂಲಕ ದೆಹಲಿ ಪ್ರವೇಶಿಸಿ, ಮಧ್ಯಾಹ್ನ 3.20ರ ಸುಮಾರಿಗೆ ಕೆಂಪು ಕೋಟೆ ಬಳಿಯ ವಾಹನ ನಿಲುಗಡೆ ಸ್ಥಳ ತಲುಪಿದ್ದ. ಆತ ಸಂಜೆ 6.30 ರವರೆಗೆ ಕಾರಿನೊಳಗೆ ಇದ್ದ ಎಂದು ಮೂಲಗಳು ತಿಳಿಸಿವೆ. ಸೋಮವಾರ ಸಂಜೆ 6.52ಕ್ಕೆ ನಿಧಾನವಾಗಿ ಚಲಿಸಿದ ವಾಹನದಲ್ಲಿ ಸ್ಫೋಟ ಸಂಭವಿಸಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಹೇಳಿದ್ದಾರೆ.
ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಮತ್ತು ಡಿಟೋನೇಟರ್‌ಗಳನ್ನು ಬಳಸಿರಬಹುದು ಎಂದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ.
ಕಾರು ಸ್ಫೋಟಕ್ಕೂ ಮುನ್ನ ಡಾ. ಉಮರ್ ನಬಿ ಕೆಂಪು ಕೋಟೆ ಬಳಿಯ ತುರ್ಕಮನ್ ಗೇಟ್ ಮಸೀದಿಗೆ ಭೇಟಿ ನೀಡಿ ಅಲ್ಲಿಂದ ನಿರ್ಗಮಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಅದರ ವಿಡಿಯೊವನ್ನು ಸುದ್ದಿ ಸಂಸ್ಥೆ 'ಎಎನ್‌ಐ' ಹಂಚಿಕೊಂಡಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.