ಪ್ರಾತಿನಿಧಿಕ ಚಿತ್ರ
ಬಹರೈಚ್: ಸಾಮಾಜಿಕ ಮಾಧ್ಯಮಗಳಿಗೆ ಉತ್ಕೃಷ್ಟ ಗುಣಮಟ್ಟದ ‘ರೀಲ್ಸ್’ಗಳನ್ನು ಮಾಡಿ, ಹೆಚ್ಚು ಲೈಕ್ಸ್‌ಗಳನ್ನು ಪಡೆಯುವ ಉದ್ದೇಶದಿಂದ ವ್ಯಕ್ತಿಯೊಬ್ಬರ ಬಳಿ ಇದ್ದ ಐಫೋನ್ ದೋಚಲು ಅವರ ಕತ್ತು ಸೀಳಿ, ಕಲ್ಲಿನಿಂದ ಜಜ್ಜಿ ಸಾಯಿಸಿದ ಘಟನೆ ಉತ್ತರ ಪ್ರದೇಶದ ನಾಗೂರ್‌ನ ಬಹರೈಚ್‌ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಶದಾಬ್ (19) ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರು ನಿವಾಸಿಯಾಗಿದ್ದಾರೆ. ತಮ್ಮ ಚಿಕ್ಕಪ್ಪನ ಮದುವೆಗಾಗಿ ಇವರು ತಮ್ಮ ಹುಟ್ಟೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆರೋಪಿ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
‘ಘಟನೆ ಜೂನ್ 20ರಂದು ನಡೆದಿತ್ತು. ಶಾದಾಬ್ ನಾಪತ್ತೆಯಾಗಿದ್ದಾರೆ ಎಂದು ಜೂನ್ 21ರಂದು ದೂರು ನೀಡಲಾಗಿತ್ತು. ಅದೇದಿನ ಶಾದಾಬ್ ಮೃತದೇಹಲ ಪೇರಲೆ ತೋಟದ ಬಾವಿಯಲ್ಲಿ ಪತ್ತೆಯಾಗಿತ್ತು. ಕತ್ತು ಸೀಳಲಾಗಿತ್ತು ತಲೆಯನ್ನು ಕಲ್ಲಿನಿಂದ ಜಜ್ಜಲಾಗಿತ್ತು. ತನಿಖೆ ಕೈಗೊಂಡು 14 ಹಾಗೂ 16 ವರ್ಷದ ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಈ ಇಬ್ಬರು, ರೀಲ್ಸ್ ಮಾಡಲು ಉತ್ತಮ ಗುಣಮಟ್ಟದ ಮೊಬೈಲ್ ಫೋನ್‌ಗಾಗಿ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಶಾದಾಬ್ ಬಳಿ ಐಫೋನ್ ಇರುವುದು ತಿಳಿದಿತ್ತು. ಅದನ್ನು ಪಡೆಯಲು ನಾಲ್ಕು ದಿನಗಳ ಹಿಂದೆ ಕೊಲೆಯ ಸಂಚು ರೂಪಿಸಿದೆವು’ ಎಂದಿರುವುದಾಗಿ ಪೊಲೀಸರಿಗೆ ಹೇಳಿದ್ದಾರೆ.
‘ಘಟನೆ ನಡೆದ ರೀಲ್ಸ್ ಮಾಡಲು ಗ್ರಾಮದ ಹೊರವಲಯಕ್ಕೆ ಶಾದಾಬ್‌ನಲ್ಲಿ ಈ ಇಬ್ಬರು ಬಾಲಕರು ಕರೆದೊಯ್ದಿದ್ದರು. ಅಲ್ಲಿ ಈತನ ಮೇಲೆ ದಾಳಿ ನಡೆಸಿದ ಬಾಲಕರು, ಚಾಕು ಬಳಸಿ ಕತ್ತು ಸೀಳಿದ್ದಾರೆ. ನಂತರ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ ಚಾಕು ಮತ್ತು ಇಟ್ಟಿಗೆಯನ್ನು ಹಾಗೂ ದೋಚಿದ ಐಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.
‘ಮೃತ ದೇಹ ಪತ್ತೆಯಾಗುತ್ತಿದ್ದಂತೆ ಇಬ್ಬರು ಆರೋಪಿಗಳು ಹಾಗೂ ಅವರ ಮನೆಯವರು ಊರು ತೊರೆದಿದ್ದರು. ಕೃತ್ಯಕ್ಕೆ ಬಳಸಿದ ಚಾಕುವನ್ನು ಬಚ್ಚಿಡಲು ಇವರ ಸಂಬಂಧಿಕರೊಬ್ಬರು ನೆರವಾಗಿದ್ದಾರೆ. ಅವರೆಲ್ಲರನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಮತ್ತೊಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಾನೂನು ಸಂಘರ್ಷಕ್ಕೆ ಒಳಪಟ್ಟಿರುವ ಬಾಲಕರನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.