ADVERTISEMENT

ಭಾರಿ ಬಿಸಿಲು: ಶಾಲೆಗಳಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ

ಪಿಟಿಐ
Published 11 ಮೇ 2022, 18:38 IST
Last Updated 11 ಮೇ 2022, 18:38 IST
ಸಾಂದರ್ಭಿಕ ಚಿತ್ರ –ಪಿಟಿಐ
ಸಾಂದರ್ಭಿಕ ಚಿತ್ರ –ಪಿಟಿಐ   

ನವದೆಹಲಿ (ಪಿಟಿಐ): ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಗರಿಷ್ಠ ತಾಪಮಾನ ತಲುಪಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಬುಧವಾರ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದು, ಸಮವಸ್ತ್ರದಲ್ಲಿ ವಿನಾಯಿತಿ ನೀಡಲು ಸಲಹೆ ನೀಡಿದೆ.

ವಿದ್ಯಾರ್ಥಿಗಳು ಸಡಿಲವಾದ, ತಿಳಿ ಬಣ್ಣದ, ಹತ್ತಿಯ ತುಂಬು ತೋಳಿನ ಬಟ್ಟೆ ಧರಿಸಲು ಅನುಮತಿ ನೀಡಬಹುದು. ಲೆದರ್‌ ಶೂ ಬದಲಿಗೆ ಕ್ಯಾನ್ವಾಸ್ ಶೂ ಬಳಸಲು ಅವಕಾಶ ನೀಡಬಹುದು, ಕುತ್ತಿಗೆ ಪಟ್ಟಿಗೆ (ಟೈ) ವಿನಾಯಿತಿ ನೀಡಬಹುದು ಎಂದು ತಿಳಿಸಲಾಗಿದೆ.

ಬೆಳಿಗ್ಗೆ 7 ಗಂಟೆಯಿಂದಲೇ ಶಾಲೆಗಳನ್ನು ತೆರೆದು ಮಧ್ಯಾಹ್ನದ ವೇಳೆಗೆ ತರಗತಿ ಕೊನೆಗೊಳಿಸಬಹುದು. ಕ್ರೀಡೆ ಸೇರಿದಂತೆ ಇತರೆ ಹೊರಾಂಗಣ ಚಟುವಟಿಕೆಗಳನ್ನು ಮುಂಜಾನೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದೆ.

ADVERTISEMENT

ಹಾಗೆಯೇ ಶಾಲಾ ಬಸ್ ಅಥವಾ ವ್ಯಾನ್‌ಗಳಲ್ಲಿ ಅವುಗಳ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಬಾರದು. ಈ ವಾಹನಗಳಲ್ಲಿ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಕಿಟ್‌ ಲಭ್ಯವಿರಬೇಕು. ನಡೆದು ಅಥವಾ ಸೈಕಲ್‌ನಲ್ಲಿ ಬರುವಾಗ ತಲೆಯನ್ನು ಸಂಪೂರ್ಣವಾಗಿ ಮುಚ್ಚುವಂತೆವಿದ್ಯಾರ್ಥಿಗಳಿಗೆ ಸಲಹೆ ನೀಡಬೇಕು. ಶಾಲಾ ವಾಹನಗಳನ್ನು ನೆರಳಿನ ಪ್ರದೇಶದಲ್ಲಿಯೇ ನಿಲುಗಡೆ ಮಾಡಬೇಕು ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.