ಕರ್ನಲ್ ಸೋಫಿಯಾ ಖುರೇಷಿ
–ಪಿಟಿಐ ಚಿತ್ರ
ನವದೆಹಲಿ: ‘ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಜವಾಬ್ದಾರಿ ಇರಬೇಕು. ದೇಶವು ಇಂಥದ್ದೊಂದು ಪರಿಸ್ಥಿತಿ ಎದುರಿಸುತ್ತಿರುವಾಗ ಸಚಿವನಾದವನಿಗೆ ತಾನೇನು ಮಾತನಾಡುತ್ತಿದ್ದೇನೆ ಎಂಬ ಅರಿವಿರಬೇಕು. ಇದೆಂಥಾ ಹೇಳಿಕೆ ನೀಡಿದ್ದೀರಿ? ಸಚಿವನಾದವರು ಸಂಯಮದಿಂದ ಇರಬೇಕು ಎಂದು ಬಯಸಲಾಗುತ್ತದೆ...’
ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರ ಕುರಿತು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಆಡಿದ ಮಾತುಗಳಿವು.
ತಮ್ಮ ಮೇಲೆ ಎಫ್‌ಐಆರ್ ದಾಖಲಿಸಿ ಎಂದು ಮಧ್ಯಪ್ರದೇಶದ ಹೈಕೋರ್ಟ್ ನೀಡಿದ ಆದೇಶಕ್ಕೆ ತಡೆ ನೀಡುವಂತೆ ಕೋರಿ ವಿಜಯ್ ಅವರು ಸುಪ್ರೀಂ ಕೋರ್ಟ್ ಮೇಟ್ಟಿಲೇರಿದ್ದರು. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ಅಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು.
‘ವಿಜಯ್ ಅವರ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ಮಾಧ್ಯಮಗಳಲ್ಲಿ ವಿಶ್ಲೇಷಿಸಲಾಗುತ್ತಿರುವ ರೀತಿಯಲ್ಲಿ ಅವರು ಹೇಳಿಕೆ ನೀಡಿಲ್ಲ. ಮಾಧ್ಯಮಗಳು ಉತ್ಪ್ರೇಕ್ಷೆ ಮಾಡುತ್ತಿವೆ. ವಿಜಯ್ ಅವರ ವಾದವನ್ನು ಹೈಕೋರ್ಟ್ ಆಲಿಸಿಲ್ಲ. ಆದ್ದರಿಂದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ನನ್ನ ಅರ್ಜಿಯ ವಿಚಾರಣೆ ನಡೆಯುವವರೆಗೆ ನನ್ನ ಮೇಲೆ ಕ್ರಮ ಕೈಗೊಳ್ಳದಂತೆ ಆದೇಶಿಸಿ’ ಎಂದು ಸಚಿವರ ಪರ ವಕೀಲರಾದ ವಿಧಾ ದತ್ತ ಮಖೀಜಾ ಅವರು ಮನವಿ ಮಾಡಿದರು.
‘ವಿಜಯ್ ಅವರ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ನೀವು ಹೈಕೋರ್ಟ್ ಬಳಿಯೇ ಮನವಿ ಮಾಡಿ. ಇವರು ಸಚಿವರು ಎನ್ನುವ ಕಾರಣಕ್ಕೆ ಇಂಥ ಮನವಿಗಳನ್ನು ಆಲಿಸಲು ಸಾಧ್ಯವಿಲ್ಲ’ ಎಂದು ಪೀಠ ಹೇಳಿತು. ‘ಹೈಕೋರ್ಟ್ ಆದೇಶವನ್ನಾದರೂ ಗಮನಿಸಿ’ ಎಂದು ವಿಭಾ ಅವರು ಪೀಠವನ್ನು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸುತ್ತೇವೆ’ ಎಂದು ತಿಳಿಸಿತು.
ಎಫ್‌ಐಆರ್: ಹೈಕೋರ್ಟ್ ಅಸಮಾಧಾನ
ಮಧ್ಯಪ್ರದೇಶ ಹೈಕೋರ್ಟ್ ಆದೇಶದಂತೆ ವಿಜಯ್ ಅವರ ವಿರುದ್ಧ ಪೊಲೀಸರು ಬುಧವಾರ ರಾತ್ರಿ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸಿರುವ ಬಗ್ಗೆ ಅಡ್ವೊಕೇಟ್ ಜನರಲ್ ಅವರು ಗುರುವಾರ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ಎಫ್‌ಐಆರ್ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
‘ಪ್ರಕರಣ ಬಿದ್ದು ಹೋಗಲಿ ಎಂದೇ ಎಫ್‌ಐಆರ್ ಬರೆದಂತಿದೆ. ಈ ಎಫ್‌ಐಆರ್ ಮೇಲೆ ನ್ಯಾಯಾಲಯಕ್ಕೆ ಹೋದರೆ, ಪ್ರಕರಣ ಬಿದ್ದೇ ಹೋಗಲಿದೆ. ಒಂದು ವೇಳೆ ನಾವು ಮೇಲ್ವಿಚಾರಣೆ ನಡೆಸದೇ ಹೋದರೆ, ಪೊಲೀಸರು ಈ ಪ್ರಕರಣದಲ್ಲಿ ನ್ಯಾಯಯುತವಾಗಿ ತನಿಖೆ ನಡೆಸಲಿದ್ದಾರೆ ಎಂಬ ನಂಬಿಕೆಯೇ ನಮಗೆ ಬರುತ್ತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಅನುರಾಧಾ ಶುಕ್ಲಾ ಅವರು ಅಭಿಪ್ರಾಯಪಟ್ಟಿದ್ದಾರೆ.
ನಾಲ್ಕು ತಾಸಿನಲ್ಲಿ ಎಫ್‌ಐಆರ್ ದಾಖಲಿಸಿ ಎಂದು ಹೈಕೋರ್ಟ್ ಆದೇಶಿಸಿದರೆ, ಪೊಲೀಸರು ಆರು ತಾಸು ತೆಗೆದುಕೊಂಡರು. ಅಲ್ಲಿಗೆ, ವಿಜಯ್ ಅವರನ್ನು ವಜಾಗೊಳಿಸುವುದನ್ನು ಬಿಟ್ಟು ಬಿಜೆಪಿಯು ಅವರನ್ನು ರಕ್ಷಿಸಲು ನಿಂತಿದೆ ಎಂದಾಯಿತುಜಿತು ಪಟ್ವಾರಿ, ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ
ವಿಜಯ್ ಅವರು ಬಿಜೆಪಿಯ ಟ್ರೋಲ್ ಪಡೆಯಂತಿದ್ದಾರೆ. ಇವರ ಹೇಳಿಕೆ ಸರಿ ಇದೆ ಎಂದು ಪ್ರಧಾನಿ ಮೋದಿ ಅವರಿಗೆ ಅನ್ನಿಸುತ್ತದೆಯೇ? ಎಲ್ಲ ವಿಷಯದಲ್ಲೂ ಹಿಂದೂ–ಮುಸ್ಲಿಂ ವಿಚಾರವನ್ನು ತೂರಿಸಲು ಬಿಜೆಪಿ ನಾಯಕರ ಮಧ್ಯೆ ಸ್ಪರ್ಧೆ ಇದೆದಿಗ್ವಿಜಯ ಸಿಂಗ್, ಕಾಂಗ್ರೆಸ್ ನಾಯಕ
ಆಪರೇಷನ್ ಸಿಂಧೂರದ ಚಹರೆಯಾಗಿದ್ದ ಮುಸ್ಲಿಂ ಸಮುದಾಯಕ್ಕೆ ಸೇರಿದ ಕರ್ನಲ್ ಸೋಫಿಯಾ ಅವರ ಬಗ್ಗೆ ವಿಜಯ್ ಅವರು ನೀಡಿದ ಹೇಳಿಕೆ ಖಂಡನೀಯ. ಹೈಕೋರ್ಟ್ ಆದೇಶದಂತೆ ಈಗ ಎಫ್‌ಐಆರ್ ದಾಖಲಿಸಲಾಗಿದೆ. ಬಿಜೆಪಿಯು ಈಗ ಯಾವ ಕ್ರಮ ಕೈಗೊಳ್ಳಲಿದೆ ಎಂದು ದೇಶದ ಕಾಯುತ್ತಿದೆಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ
ಯಾವ ಶಾಗಳೂ (ಶಾ ಎನ್ನುವ ಹೆಸರು ಇಟ್ಟುಕೊಂಡವರು) ದೇಶಪ್ರೇಮಿಗಳಲ್ಲ. ನಾನು ಶಾ ಎಂದು ಒತ್ತಿ ಹೇಳುತ್ತಿದ್ದೇನೆ. ಇವರೆಲ್ಲರೂ ಬೆನ್ನ ಹಿಂದೆ ದಾಳಿ ಮಾಡುವವರೇಸಂಜಯ್ ರಾವುತ್, ಶಿವಸೇನಾ (ಉದ್ಧವ್ ಬಣ) ಸಂಸದ
ರಾವುತ್ ಅವರ ಹೇಳಿಕೆಯು ನೀಚತನದ ಮತ್ತು ಜಾತಿವಾದಿ ಹೇಳಿಕೆಯಾಗಿದೆ. ಅವರು ಇಡೀ ಶಾ ಸಮುದಾಯವನ್ನೇ ಅವಮಾನಿಸಿದ್ದಾರೆಪ್ರದೀಪ್ ಭಂಡಾರಿ, ಬಿಜೆಪಿ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.