ADVERTISEMENT

ತೆಲಂಗಾಣದ ಬ್ರಾಂಡ್ ಅಂಬಾಸಿಡರ್ ಸ್ಥಾನದಿಂದ ಪಾಕ್ ಸೊಸೆಯನ್ನು ಕೈಬಿಡಿ: ರಾಜಾ ಸಿಂಗ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 13:25 IST
Last Updated 18 ಫೆಬ್ರುವರಿ 2019, 13:25 IST
ಸಾನಿಯಾ ಮಿರ್ಜಾ- ರಾಜಾ ಸಿಂಗ್
ಸಾನಿಯಾ ಮಿರ್ಜಾ- ರಾಜಾ ಸಿಂಗ್   

ಹೈದರಾಬಾದ್: ತೆಲಂಗಾಣದ ಬ್ರಾಂಡ್ ಅಂಬಾಸಿಡರ್ ಸ್ಥಾನದಿಂದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಕೈ ಬಿಡಿ ಎಂದು ಬಿಜೆಪಿ ಶಾಸಕ ರಾಜಾ ಸಿಂಗ್ ಒತ್ತಾಯಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ರಾಜಾ ಸಿಂಗ್ ಈ ರೀತಿ ಒತ್ತಾಯಿಸುತ್ತಿರುವ ವಿಡಿಯೊವೊಂದು ಹರಿದಾಡುತ್ತಿದೆ.

ರಾಜಾ ಸಿಂಗ್ ಹೇಳಿದ್ದೇನು?
ಪುಲ್ವಾಮ ದಾಳಿ ಹಿನ್ನೆಲೆಯಲ್ಲಿ ತೆಲಂಗಾಣ ಸಿಎಂ ಕೆ.ಚಂದ್ರ ಶೇಖರ್ ರಾವ್ ಅವರುಫೆಬ್ರುವರಿ 17ರಂದು ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ಹೇಳಿದ್ದರು.ಏತನ್ಮಧ್ಯೆ, ತೆಲಂಗಾಣ ಮುಖ್ಯಮಂತ್ರಿಯಲ್ಲಿ ನನ್ನದೊಂದು ಮನವಿ ಇದೆ. ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ಪಾಕಿಸ್ತಾನದಿಂದ ಬಾಂಧವ್ಯ ಕಡಿದುಕೊಂಡಿರುವಾಗ ನಾವೂ ಒಂದು ಬಾಂಧವ್ಯವನ್ನು ಕಡಿದುಕೊಳ್ಳಬೇಕಿದೆ.

ತೆಲಂಗಾಣದ ಬ್ರಾಂಡ್ ಅಂಬಾಸಿಡರ್ ಆಗಿರುವ ಸಾನಿಯಾ ಮಿರ್ಜಾನನ್ನು ತಕ್ಷಣವೇ ಆ ಸ್ಥಾನದಿಂದ ಕೈ ಬಿಡಬೇಕು.ಯಾಕೆಂದರೆ ತೆಲಂಗಾಣದಲ್ಲಿ ವಿವಿಎಸ್ ಲಕ್ಷ್ಮಣ್, ಪಿ.ವಿ ಸಿಂಧು, ಸೈನಾ ನೆಹ್ವಾಲ್ ಮೊದಲಾದ ಆಟಗಾರರಿದ್ದಾರೆ.ಅವರು ತೆಲಂಗಾಣ ಮತ್ತು ಭಾರತಕ್ಕಾಗಿ ಪದಕ ಗಳಿಸಿದ್ದಾರೆ.ನಮ್ಮಬ್ರಾಂಡ್ ಅಂಬಾಸಿಡರ್ ಆಗಿ ನಮಗೆ ಪಾಕಿಸ್ತಾನಿ ಸೊಸೆಯ ಅಗತ್ಯವಿಲ್ಲ ಎಂದು ಗೋಶಾಮಹಲ್ ಶಾಸಕ ಹೇಳಿದ್ದಾರೆ.

ADVERTISEMENT

ಪುಲ್ವಾಮ ಆತ್ಮಾಹುತಿ ದಾಳಿ ಬಗ್ಗೆ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದ ಸಾನಿಯಾ ಮಿರ್ಜಾ, ನಾನು ಸಾರ್ವಜನಿಕವಾಗಿ ಬಂದು ದಾಳಿಯನ್ನು ಖಂಡಿಸುವ, ಸಾಮಾಜಿಕ ಮಾಧ್ಯಮಗಳಲ್ಲಿ ಗಟ್ಟಿ ದನಿಯಲ್ಲಿ ಚೀರಾಡುತ್ತಾನಾನು ಭಯೋತ್ಪಾದನೆಯ ವಿರುದ್ದ ಎಂದು ಹೇಳುವ ಅಗತ್ಯವಿಲ್ಲ. ಖಂಡಿತವಾಗಿಯೂ ನಾವು ಭಯೋತ್ಪಾದನೆ ಮತ್ತು ಅದನ್ನು ಹಬ್ಬಿಸುವವರ ವಿರುದ್ಧವಿದ್ದೇವೆ. ನಾನು ಭಯೋತ್ಪಾದನೆಯನ್ನು ವಿರೋಧಿಸುತ್ತೇನೆ.ನಾನು ನನ್ನ ದೇಶಕ್ಕಾಗಿ ಆಡುತ್ತೇನೆ, ನಾನು ದೇಶಕ್ಕಾಗಿ ದುಡಿಯುತ್ತೇನೆ, ಈ ಮೂಲಕ ನಾನು ದೇಶ ಸೇವೆ ಮಾಡುತ್ತೇನೆ.

ನಾನು ಸಿಆರ್‌ಪಿಎಫ್ಯೋಧರು ಮತ್ತು ಅವರ ಕುಟುಂಬದೊಂದಿಗೆ ಇದ್ದೇನೆ.ದೇಶವನ್ನು ರಕ್ಷಿಸುವ ಅವರು ನಮ್ಮ ನಿಜವಾದ ಹೀರೊಗಳು. ಅವರಿಗಾಗಿ ನನ್ನ ಹೃದಯ ಮಿಡಿದಿದೆ. ಫೆಬ್ರುವರಿ 14 ಭಾರತದ ಪಾಲಿಗೆ ಕಪ್ಪು ದಿನ ಆಗಿತ್ತು.ಇಂಥದ್ದೊಂದು ದಿನ ಮತ್ತೆ ಮರಳಿ ಬಾರದಿರಲಿ. ಈಗ ಎಷ್ಟೇ ಸಂತಾಪ ವ್ಯಕ್ತ ಪಡಿಸಿದರೂ ಅದನ್ನು ಮರೆಯಲಾಗುವುದಿಲ್ಲ.ಈ ಕೃತ್ಯವನ್ನು ಮರೆಯಲಾಗುವುದೂ ಇಲ್ಲ , ಕ್ಷಮಿಸಲೂ ಆಗುವುದಿಲ್ಲ . ನಾನು ಈಗಲೂ ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ದ್ವೇಷ ಕಾರುವ ಬದಲು ನೀವೂ ಅದನ್ನೇ ಮಾಡಿ. ಇದರಿಂದಾಗಿ ಒಳ್ಳೆಯದಾಗುತ್ತದೆ. ಇನ್ನೊಬ್ಬರನ್ನು ಹೀಯಾಳಿಸುವುದರಿಂದ ನಿಮಗೇನೂ ದಕ್ಕಲಾರದು, ಜಗತ್ತಿನಲ್ಲಿ ಭಯೋತ್ಪಾದನೆಗೆ ಜಾಗವೇ ಇಲ್ಲ, ಇರಲೂ ಬಾರದು ಎಂದು ಸಾನಿಯಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.