
ಮೋದಿ
ಪಿಟಿಐ ಚಿತ್ರ
77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರು ದೇಶದ ಜನತೆಗೆ ಶುಭ ಕೋರಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಭಾರತದ ಹೆಮ್ಮೆ ಮತ್ತು ವೈಭವದ ಸಂಕೇತವಾದ ಗಣರಾಜ್ಯೋತ್ಸವ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕಾಗಿ ನಮ್ಮಲ್ಲರ ಸಂಕಲ್ಪ ಇನ್ನಷ್ಟು ಬಲಗೊಳ್ಳಲಿ ಎಂದು ಹೇಳಿದ್ದಾರೆ.
‘ಜಗತ್ತಿನಲ್ಲಿ ಶಾಂತಿ ನೆಲೆಸಿದರೆ ಮಾತ್ರ ಮನುಕುಲದ ಭವಿಷ್ಯ ಸುಭದ್ರವಾಗಿರಲು ಸಾಧ್ಯ. ನಿಮ್ಮ ಜೀವನವು ಸಂತೋಷ, ಶಾಂತಿ, ಭದ್ರತೆ ಮತ್ತು ಸಾಮರಸ್ಯದಿಂದ ತುಂಬಲಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ನಮ್ಮ ದೇಶಭಕ್ತಿ, ಕರ್ತವ್ಯ ಪ್ರಜ್ಞೆಯು ಪ್ರಜಾಪ್ರಭುತ್ವವನ್ನು ಬಲಿಷ್ಠವಾಗಿಸುತ್ತದೆ. ನಮ್ಮ ಯೋಧರನ್ನು ನೆನಪಿಸಿಕೊಳ್ಳೋಣ. ಸಂವಿಧಾನದ ಆದರ್ಶಗಳಿಂದ ಪ್ರೇರಿತರಾಗಿ, ಬಲಿಷ್ಠ, ಸಮೃದ್ಧ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವತ್ತ ಗಮನಹರಿಸೋಣ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ನಮ್ಮ ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಶ್ರೇಷ್ಠ ಆಯುಧವಾಗಿದೆ. ಇದು ನಮ್ಮ ಧ್ವನಿ, ನಮ್ಮ ಹಕ್ಕುಗಳ ರಕ್ಷಣಾತ್ಮಕ ಕವಚವಾಗಿದೆ. ಸಂವಿಧಾನದ ಅಡಿಪಾಯದ ಗಣರಾಜ್ಯ ನಿಂತಿದೆ, ಇದು ಸಮಾನತೆ ಮತ್ತು ಸಾಮರಸ್ಯವನ್ನು ಸಂಕೇತವಾಗಿದೆ. ಸಂವಿಧಾನವನ್ನು ರಕ್ಷಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳಿಗೆ ನಿಜವಾದ ಗೌರವ ನೀಡುವುದಾಗಿದೆ‘ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
‘ಭಾರತವು ತನ್ನ ಆಡಳಿತವನ್ನು ತಾನೇ ನಡೆಸಲು ರಚಿಸಿಕೊಂಡ ಸಂವಿಧಾನವು ಜಾರಿಗೆ ಬಂದು ಇಂದಿಗೆ 77 ವರ್ಷಗಳು. ದೇಶದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಸಮಾನವಾಗಿ ನೀಡುವವೇ ಸಂವಿಧಾನದ ಮೂಲ ಆಶಯ. ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದ್ದೊಂದು ಸಂವಿಧಾನವನ್ನು ನಮಗೆ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನೆದು, ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ದಶಕಗಳ ಬದಲಾವಣೆ ಮತ್ತು ಸವಾಲುಗಳ ಮೂಲಕ ಭಾರತವನ್ನು ಮುನ್ನಡೆಸಿದ ಸಂವಿಧಾನಕ್ಕೆ ನಾನು ತಲೆಬಾಗುತ್ತೇನೆ. ಸಾರ್ವಜನಿಕ ಜವಾಬ್ದಾರಿ ಹೊತ್ತ ವ್ಯಕ್ತಿಯಾಗಿ, ಸಂವಿಧಾನದಡಿ ಜನರಿಗೆ ನ್ಯಾಯ, ಅವಕಾಶ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತೇನೆ. ಪ್ರಜಾಪ್ರಭುತ್ವ ಮೌಲ್ಯಗಳಿಗೆ ಗೌರವ ಸಲ್ಲಿಸುವ ನನ್ನ ಬದ್ಧತೆಯನ್ನು ನಾನು ಪುನರುಚ್ಚರಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗಣರಾಜ್ಯೋತ್ಸವದಂದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪ್ರಜಾಪ್ರಭುತ್ವ, ಏಕತೆ ಮತ್ತು ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ನೆನಪಿಸುತ್ತದೆ. ಪ್ರಧಾನ ಮಂತ್ರಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಬಲಿಷ್ಠ, ಸ್ವಾವಲಂಬಿ ಮತ್ತು ವಿಕ್ಷಿತ ಭಾರತವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.