ADVERTISEMENT

77ನೇ ಗಣರಾಜೋತ್ಸವ: ‘ಸಿಂಧೂರ’ ಶೌರ್ಯ, ಸಾಂಸ್ಕೃತಿಕ ಪರಂಪರೆ ಅನಾವರಣ

ಪಿಟಿಐ
Published 26 ಜನವರಿ 2026, 15:46 IST
Last Updated 26 ಜನವರಿ 2026, 15:46 IST
<div class="paragraphs"><p>ಸಿಆರ್‌ಪಿಎಫ್‌ ಯೋಧರಿಂದ ಸಾಹಸ</p></div>

ಸಿಆರ್‌ಪಿಎಫ್‌ ಯೋಧರಿಂದ ಸಾಹಸ

   

ನವದೆಹಲಿ (ಪಿಟಿಐ): ಸಾಂಸ್ಕೃತಿಕ ಪರಂಪರೆ, ದೇಶದ ಆರ್ಥಿಕ ಪ್ರಗತಿ ಮತ್ತು ಆಪರೇಷನ್ ಸಿಂಧೂರ ಸಮಯದಲ್ಲಿ ಬಳಸಲಾದ ಕ್ಷಿಪಣಿಗಳು, ಯುದ್ಧವಿಮಾನಗಳನ್ನು ಒಳಗೊಂಡ ಸೇನಾ ಶಕ್ತಿಯ ಭವ್ಯ ಪ್ರದರ್ಶನವು ರಾಷ್ಟ್ರದ ರಾಜಧಾನಿಯ ಕರ್ತವ್ಯ ಪಥದಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಮೆರುಗು ತುಂಬಿತು.

ಐರೋಪ್ಯ ಕೌನ್ಸಿಲ್‌ನ ಅಧ್ಯಕ್ಷ ಆಂಟೋನಿಯೊ ಕೋಸ್ಟ ಮತ್ತು ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ಫಾಂಡರ್‌ ಲೇಯನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಐರೋಪ್ಯ ಒಕ್ಕೂಟದ ಇಬ್ಬರು ಪ್ರಮುಖ ನಾಯಕರ ಉಪಸ್ಥಿತಿಯು ಭಾರತ–ಯೂರೋಪ್‌ ನಡುವಿನ ರಾಜತಾಂತ್ರಿಕ ಸಂಬಂಧ ವೃದ್ಧಿಯಾಗಿರುವುದಕ್ಕೆ ಸಾಕ್ಷಿಯಾಯಿತು.

ADVERTISEMENT

‘ವಂದೇ ಮಾತರಂ’ ಗೀತೆಗೆ 150 ವರ್ಷಗಳು ತುಂಬಿರುವುದು ಈ ಬಾರಿಯ ಸಮಾರಂಭದ ಕೇಂದ್ರಬಿಂದು ಆಗಿದ್ದರೂ, ಭಾರತೀಯ ಸೇನೆಯ ‘ಸಿಂಧೂರ’ ಕಾರ್ಯಾಚರಣೆ ಕೂಡಾ ಮಹತ್ವ ಪಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗೌರವ ವಂದನೆ ಸ್ವೀಕರಿಸುವುದರೊಂದಿಗೆ ಭವ್ಯ ಮೆರವಣಿಗೆಗೆ ಚಾಲನೆ ಲಭಿಸಿತು. ಮುರ್ಮು ಅವರು ಕೋಸ್ಟಾ ಮತ್ತು ಉರ್ಸುಲಾ ಅವರೊಂದಿಗೆ ಸಾರೋಟಿನಲ್ಲಿ ಕರ್ತವ್ಯ ಪಥಕ್ಕೆ ಬಂದರು.

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್, ಗೃಹ ಸಚಿವ ಅಮಿತ್‌ ಶಾ, ಕೇಂದ್ರದ ಇತರ ಹಲವು ಸಚಿವರು, ಸೇನೆಯ ಉನ್ನತ ಅಧಿಕಾರಿಗಳು, ವಿದೇಶಗಳ ರಾಜತಾಂತ್ರಿಕರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಬ್ರಹ್ಮೋಸ್ ಮತ್ತು ಆಕಾಶ್ ಕ್ಷಿಪಣಿ ವ್ಯವಸ್ಥೆ, ರಾಕೆಟ್ ಲಾಂಚರ್ ‘ಸೂರ್ಯಾಸ್ತ್ರ’, ಸೇನೆಯಲ್ಲಿರುವ ಅತ್ಯಾಧುನಿಕ ಯುದ್ಧ ಟ್ಯಾಂಕ್ ‘ಅರ್ಜುನ’ ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಇತರ ಶಸ್ತ್ರಾಸ್ತ್ರಗಳು ಗಮನ ಸೆಳೆದವು.

‘ವಿವಿಧತೆಯಲ್ಲಿ ಏಕತೆ’ ವಿಷಯದಲ್ಲಿ ಸುಮಾರು 100 ಕಲಾವಿದರು ನೀಡಿದ ಪ್ರದರ್ಶನ ಕಣ್ಮನ ಸೆಳೆಯಿತು. ಈ ಕಾರ್ಯಕ್ರಮವು ದೇಶದ ಏಕತೆ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುವ ಸಂಗೀತ ವಾದ್ಯಗಳ ಭವ್ಯ ಪ್ರಸ್ತುತಿಯನ್ನು ಒಳಗೊಂಡಿತ್ತು.

ಮೂರೂ ಭದ್ರತಾಪಡೆಗಳು ನಡೆಸುವ ‘ಜಂಟಿ ಕಾರ್ಯಾಚರಣೆ’ ಬಿಂಬಿಸುವ ಸ್ತಬ್ಧಚಿತ್ರಗಳು ಹಾಗೂ ಯುದ್ಧದ ಸನ್ನಿವೇಶದ ಪ್ರಾತ್ಯಕ್ಷಿಕೆಯು ಸೇನೆಯ ಸಾಮರ್ಥ್ಯವನ್ನು ತೆರೆದಿಟ್ಟಿತು. ಸೇನಾ ವ್ಯವಹಾರಗಳ ಇಲಾಖೆಯು (ಡಿಎಂಎ) ಪ್ರದರ್ಶಿಸಿದ ಸ್ತಬ್ಧಚಿತ್ರವು ಆಪರೇಷನ್ ಸಿಂಧೂರದಲ್ಲಿ ಭಾರತದ ವಿಜಯ ಮತ್ತು ನಿರ್ಣಾಯಕ ಕಾರ್ಯಾಚರಣೆಯ ಸಮಯದಲ್ಲಿ ಸಶಸ್ತ್ರ ಪಡೆಗಳ ಮೂರೂ ವಿಭಾಗಗಳ ಸಮನ್ವಯತೆಯನ್ನು ಅನಾವರಣಗೊಳಿಸಿತು.

ಡಿಎಂಎಯ ಸ್ತಬ್ಧಚಿತ್ರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಒಂದು ಬದಿಯಲ್ಲಿ ಕಾರ್ಯಾಚರಣೆಗೆ ಬಳಸಿದ ಅಸ್ತ್ರಗಳ ಪ್ರತಿಕೃತಿಗಳಿದ್ದರೆ, ಇನ್ನೊಂದು ಬದಿಯಲ್ಲಿ ಪಾಕಿಸ್ತಾನದಲ್ಲಿ ನಾಶ ಪಡಿಸಲಾಗದ ಗುರಿಗಳನ್ನು ಚಿತ್ರಿಸಲಾಗಿತ್ತು. 

ಯುದ್ಧದ ವ್ಯೂಹ ರಚನೆ ಪ್ರದರ್ಶನ

ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಮೆರವಣಿಗೆಯಲ್ಲಿ ವಾಯು ಸೇನೆಯನ್ನೂ ಒಳಗೊಂಡಂತೆ ಯುದ್ಧದ ಸಂದರ್ಭದ ವ್ಯೂಹ ರಚನೆಯನ್ನು ಹಂತಹಂತವಾಗಿ ಪ್ರದರ್ಶಿಸಿತು. ಯುದ್ಧದ ಸಮಯದಲ್ಲಿ ವಿವಿಧ ಪಡೆಗಳ ಮತ್ತು ಶಸ್ತ್ರಾಸ್ತ್ರಗಳ ಕ್ರಮಬದ್ದ ಜೋಡಣೆ ಹೇಗೆ ಇರುತ್ತದೆ ಎಂಬುದು ಅನಾವರಣಗೊಂಡಿತು.

ಅಶ್ವಪಡೆಯ 61 ಸಿಬ್ಬಂದಿ ಯುದ್ಧದ ಸಮವಸ್ತ್ರ ಧರಿಸಿ ಪಾಲ್ಗೊಂಡರು. ನೌಕಾಪಡೆ ಮತ್ತು ವಾಯುಪಡೆಯ ತಲಾ 144 ಸಿಬ್ಬಂದಿ ಪರೇಡ್‌ನಲ್ಲಿ ಭಾಗವಹಿಸಿದರು.

ಸೇನೆಯ ಅತ್ಯಾಧುನಿಕ ಯುದ್ಧ ವಾಹನಗಳು ಸಾಗುವಾಗ ಸ್ವದೇಶಿ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿರುವ ‘ಧ್ರುವ’ ಮತ್ತು ‘ರುದ್ರ’ ಹೆಲಿಕಾಪ್ಟರ್‌ಗಳು ವೈಮಾನಿಕ ಬೆಂಬಲ ನೀಡಿದವು. ‘ಟಿ–90 ಭೀಷ್ಮ’ ಮತ್ತು ‘ಅರ್ಜುನ’ ಟ್ಯಾಂಕ್‌ಗಳು ಸಾಗುವಾಗ ‘ಅಪಾಚೆ ಎಎಚ್–64ಇ’ ಮತ್ತು ‘ಪ್ರಚಂಡ’ ಹೆಲಿಕಾಪ್ಟರ್‌ಗಳು ಬೆಂಗಾವಲಾಗಿ ಹಾರಾಟ ನಡೆಸಿದವು.

ಸ್ಕ್ವಾಡ್ರನ್‌ ಲೀಡರ್ ಜಗದೀಶ್‌ ಕುಮಾರ್‌ ನೇತೃತ್ವದಲ್ಲಿ ವಾಯುಪಡೆಯ ಸಿಬ್ಬಂದಿ ಇತ್ತ ಪರೇಡ್‌ ನಡೆಸುತ್ತಿದ್ದಾಗ, ಆಗಸದಲ್ಲಿ ತಲಾ ಎರಡು ರಫೇಲ್, ಮಿಗ್–29 ಮತ್ತು ಸುಖೋಯ್–30 ಯುದ್ದವಿಮಾನಗಳು ತೋರಿದ ಕಸರತ್ತು ನೆರೆದವರ ಮೈನವಿರೇಳುವಂತೆ ಮಾಡಿತು. 

ರಾಹುಲ್‌, ಖರ್ಗೆ ಭಾಗಿ:

ಸಂಸತ್ತಿನ ಎರಡೂ ಸದನಗಳ ವಿರೋಧ ಪಕ್ಷಗಳ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಮತ್ತು ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಅವರು ಸಮಾರಂಭದಲ್ಲಿ ಪಾಲ್ಗೊಂಡರು.

ಧನಕರ್‌ ಅವರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಮತ್ತು ಖರ್ಗೆ ಅವರೊಂದಿಗೆ ಮೊದಲ ಸಾಲಿನಲ್ಲಿ ಕುಳಿತರು. ಖರ್ಗೆ ಅವರು ಅದಕ್ಕೂ ಮುನ್ನ ಮೂರನೇ ಸಾಲಿನಲ್ಲಿದ್ದ ರಾಹುಲ್‌ ಜತೆ ಕೆಲಹೊತ್ತು ಕುಳಿತಿದ್ದರು. ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್‌ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರೂ ಅತಿಥಿಗಳಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.