
ಪೂರ್ವಾಭ್ಯಾಸದಲ್ಲಿ ತೊಡಗಿರುವ ಸೈನಿಕರು
ಪಿಟಿಐ ಚಿತ್ರ
ನವದೆಹಲಿ: 77ನೇ ಗಣರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ಪರೇಡ್‌ಗೆ ತಯಾರಿ ನಡೆಯುತ್ತಿದೆ.
ಈ ಹೊತ್ತಿನಲ್ಲಿ ಜನವರಿ 26 ರಂದು ನಡೆಯುವ ಪರೇಡ್ ವೀಕ್ಷಣೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಪ್ರತಿದಿನ 2,225 ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಜ.5ರಿಂದಲೇ ಟಿಕೆಟ್ ಮಾರಾಟವಾಗಿದ್ದು, ಜ.14 ಟಿಕೆಟ್ ಪಡೆಯಲು ಕೊನೆಯ ದಿನವಾಗಿದೆ. ಇದಕ್ಕೆ ₹100 ಮತ್ತು ₹20 ದರ ನಿಗದಿಯಾಗಿದೆ.
ಪರೇಡ್ ಮಾತ್ರವಲ್ಲದೆ ಜನವರಿ 28ರಂದು ನಡೆಯುವ ‘ಬೀಟಿಂಗ್ ದ ರಿಟ್ರಿಟ್’ನ ಸಮವಸ್ತ್ರ ಸಹಿತ ಪೂರ್ವಾಭ್ಯಾಸ ವೀಕ್ಷಿಸಲು ಮತ್ತು ಜ.29ರಂದು ನಡೆಯುವ ‘ಬೀಟಿಂಗ್ ದ ರಿಟ್ರಿಟ್’ ಸಮಾರಂಭವನ್ನು ವೀಕ್ಷಿಸಲು ಟಿಕೆಟ್ ಪಡೆದುಕೊಳ್ಳಬಹುದು.
ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಂಗೀತದ ಬ್ಯಾಂಡ್‌ಗಳು ಭಾರತದಲ್ಲಿ ಅಸ್ತಿತ್ವದಲ್ಲಿರುವ 31 ರಾಗಗಳನ್ನು ನುಡಿಸುವ ಕಾರ್ಯಕ್ರಮವೇ ‘ಬೀಟಿಂಗ್ ದ ರಿಟ್ರೀಟ್’. ಇದು ಗಣರಾಜ್ಯೋತ್ಸವ ಆಚರಣೆಯ ಅಂತ್ಯವನ್ನು ಸೂಚಿಸುವ ಮಿಲಿಟರಿ ಸಂಪ್ರದಾಯವಾಗಿದೆ.
ಬೀಟಿಂಗ್ ದ ರಿಟ್ರೀಟ್‌ನ ಸಮವಸ್ತ್ರ ಸಹಿತ ಪೂರ್ವಾಭ್ಯಾಸ ವೀಕ್ಷಿಸಲು ₹20 ಹಾಗೂ ಬೀಟಿಂಗ್ ದ ರಿಟ್ರೀಟ್ ಕಾರ್ಯಕ್ರಮ ವೀಕ್ಷಿಸಲು ₹100 ಟಿಕೆಟ್ ದರ ನಿಗದಿಪಡಿಸಲಾಗಿದೆ.
ಟಿಕೆಟ್ ಪಡೆಯುವುದು ಹೇಗೆ?
ಟಿಕೆಟ್‌ಗಳನ್ನು ಸರ್ಕಾರದ ’ಆಮಂತ್ರಣ್’ ವೆಬ್‌ಸೈಟ್‌ನಲ್ಲಿ ಪಡೆಯಬಹುದು.
ಆಮಂತ್ರಣ್ ವೆಬ್‌ಸೈಟ್‌ನ ಅಧಿಕೃತ ಖಾತೆಗೆ ಭೇಟಿಕೊಡಿ (www.aamantran.mod.gov.in).
ಹೆಸರು, ಇ–ಮೇಲ್ ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಿ. ಒಟಿಪಿ ಬರುತ್ತದೆ.
ಒಟಿಪಿ ನಮೂದಿಸಿ ವಿವರಗಳನ್ನು ಸಲ್ಲಿಸಿ ಅಥವಾ ಆಧಾರ್ ಕಾರ್ಡ್‌ಅನ್ನು ಲಗತ್ತಿಸಿ.
ಯಾವ ಕಾರ್ಯಕ್ರಮಕ್ಕೆ ಹೋಗಬೇಕು ಎನ್ನುವುದನ್ನು ಆಯ್ಕೆ ಮಾಡಿ. ಕುಟುಂಬ ಸದಸ್ಯರು, ಸ್ನೇಹಿತರು ನಿಮ್ಮೊಂದಿಗೆ ಬರುವವರಿದ್ದರೆ ಅವರ ಹೆಸರನ್ನೂ ಸೇರಿಸಿ.
ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಟಿಕೆಟ್ ಮಾರಾಟ ಆರಂಭವಾಗಿ ಅಂದಿನ ಕೋಟಾ ಮುಗಿಯವರೆಗೆ ಟಿಕೆಟ್ ಮಾರಾಟ ನಡಯುತ್ತದೆ.