ADVERTISEMENT

ಈಗ ಕಲೆಕ್ಟರ್ ಸಾಹೇಬರು ಓದುತ್ತಾರೆ!

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 18:51 IST
Last Updated 26 ಜನವರಿ 2019, 18:51 IST

ಗ್ವಾಲಿಯರ್: ಗಣರಾಜ್ಯೋತ್ಸವ ಭಾಷಣ ಮಾಡಬೇಕಿದ್ದ ಮಧ್ಯಪ್ರದೇಶ ಸರ್ಕಾರದ ಸಚಿವೆ ಇಮರತಿ ದೇವಿ ಅವರು ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ ಘಟನೆ ನಡೆಯಿತು.

ಧ್ವಜಾರೋಹಣ ನೆರವೇರಿಸಿದ ಸಚಿವರು ಬಳಿಕ ಭಾಷಣ ಆರಂಭಿಸಿ ಒಂದೆರೆಡು ಸಾಲುಗಳನ್ನು ಓದಿದರು. ಉಳಿದ ಭಾಷಣವನ್ನು ಓದುವಂತೆ ಜಿಲ್ಲಾಧಿಕಾರಿಗಳ ಕೈಗೆ ಭಾಷಣದ ಪ್ರತಿ ಕೊಟ್ಟರು. ಜಿಲ್ಲಾಧಿಕಾರಿ ಭರತ್ ಯಾದವ್ ಅವರು ಸಚಿವರ ಆಜ್ಞೆಯನ್ನು ಪಾಲಿಸಿ, ಪೂರ್ತಿ ಭಾಷಣ ಓದಿ ಮುಗಿಸಿದರು.

‘ಈಗ ಕಲೆಕ್ಟರ್ ಸಾಹೇಬರು ಓದುತ್ತಾರೆ’ ಎಂದು ಅವರು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ADVERTISEMENT

ಖಾಲಿ ಮೈದಾನದಲ್ಲಿ ರಾಜ್ಯಪಾಲರ ಭಾಷಣ

ಐಜ್ವಾಲ್: ಮಿಜೋರಾಂ ರಾಜ್ಯಪಾಲ ಕೆ. ರಾಜಶೇಖರನ್ ಅವರು ಬಹುತೇಕ ಖಾಲಿಯಿದ್ದ ಮೈದಾನದಲ್ಲಿಯೇ ಗಣರಾಜ್ಯೋತ್ಸವ ಭಾಷಣ ಮಾಡಿದರು. ಪೌರತ್ವ ತಿದ್ದಿಪಡಿ ಮಸೂದೆ ವಿರೋಧಿಸಿ ರಾಜ್ಯದಾದ್ಯಂತ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದ ಕಾರಣ, ಮೈದಾನವು ಬಹುತೇಕ ಖಾಲಿಯಾಗಿತ್ತು.

ಜನರಾರೂ ಭಾಗಿಯಾಗಿರಲಿಲ್ಲ. ಆದರೆ ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಮಾತ್ರ ಇದ್ದರು.

3 ಲಕ್ಷ ಪುಷ್ಪಗಳಲ್ಲಿ ಗಾಂಧೀಜಿ ದರ್ಶನ

ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ರಾಜಪಥದಲ್ಲಿ ನಡೆದ ಪಥಸಂಚಲನದಲ್ಲಿ ಮೂರು ಲಕ್ಷ ಚೆಂಡು ಹೂ, ಮಲ್ಲಿಗೆ, ಗುಲಾಬಿಯನ್ನು ಬಳಸಿ ಅಲಂಕರಿಸಿದ್ದ ಮಹಾತ್ಮ ಗಾಂಧಿ ಸ್ತಬ್ಧಚಿತ್ರ ನೋಡುಗರ ಕಣ್ಮನ ಸೆಳೆಯಿತು.

ಗಾಂಧೀಜಿಯ 150ನೇ ಜನ್ಮದಿನಾಚರಣೆ ಪ್ರಯುಕ್ತ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲುಡಿ) ಈ ಸ್ತಬ್ಧ ಚಿತ್ರವನ್ನು ಸಿದ್ಧಪಡಿಸಿತ್ತು. ಸ್ತಬ್ಧ ಚಿತ್ರದ ಮುಂಭಾಗದಲ್ಲಿ ಹೂವಿನಿಂದ ತಯಾರಿಸಿದ ದೊಡ್ಡದಾದ ಗಾಂಧಿ ಪ್ರತಿಮೆ ಇರಿಸಲಾಗಿತ್ತು.
ಮಧ್ಯಭಾಗದಲ್ಲಿ ದಂಡಿ ಯಾತ್ರೆಯನ್ನು ಪ್ರತಿಬಿಂಬಿಸುವ ದೃಶ್ಯಗಳನ್ನುಕಟ್ಟಿಕೊಡಲಾಗಿತ್ತು. ವಿಶ್ವ ಶಾಂತಿ ಮತ್ತುಏಕತೆಗೆ ಗಾಂಧಿ ನೀಡಿದ ಸಂದೇಶಗಳು ಸ್ತಬ್ಧ ಚಿತ್ರದಲ್ಲಿ ಪ್ರದರ್ಶನಗೊಂಡಿತು.

ಮೂರು ಲಕ್ಷ ವಿವಿಧ ಬಗೆಯ ಪುಷ್ಪಗಳು, ದಳಗಳು, ಎಲೆಗಳನ್ನು ಬಳಸಿ 400 ಕುಶಲ ಕರ್ಮಿಗಳು ಈಸ್ತಬ್ಧಚಿತ್ರವನ್ನು ನಿರ್ಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.