ADVERTISEMENT

ಮಾತನಾಡಲು ಅವಕಾಶ ಕೇಳಿದ್ದಕ್ಕೆ ಸ್ಪೀಕರ್ ಓಡಿ ಹೋದರು: ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2025, 9:31 IST
Last Updated 26 ಮಾರ್ಚ್ 2025, 9:31 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

– ಪಿಟಿಐ ಚಿತ್ರ

ನವದೆಹಲಿ: ಲೋಕಸಭೆ ಕಲಾಪಗಳನ್ನು ಪ್ರಜಾಪ್ರಭುತ್ವ ವಿರೋಧಿ ವಿಧಾನದಲ್ಲಿ ನಡೆಸಲಾಗುತ್ತಿದ್ದು, ನನಗೆ ಮಾತನಾಡಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.

ADVERTISEMENT

‘ಸದನದ ಘನತೆಯನ್ನು ಎತ್ತಿಹಿಡಿಯಲು ಸದಸ್ಯರು ಪಾಲಿಸಬೇಕಾದ ಕಾರ್ಯವಿಧಾನದ ನಿಯಮಗಳನ್ನು ಲೋಕಸಭೆ ವಿರೋಧ ಪ‍ಕ್ಷದ ನಾಯಕರು ಪಾಲಿಸಬೇಕು’ ಎಂದು ಸ್ಪೀಕರ್ ಓಂ ಬಿರ್ಲಾ ಅವರು ರಾಹುಲ್ ಗಾಂಧಿಗೆ ಹೇಳಿದ್ದರು. ಇದರ ಬೆನ್ನಲ್ಲೇ ಈ ಪ್ರತಿಕ್ರಿಯೆ ಬಂದಿದೆ.

ನನ್ನ ಬಗ್ಗೆ ಹೇಳಿಕೆ ನೀಡಿ, ನನಗೆ ಮಾತನಾಡಲೂ ಅವಕಾಶ ನೀಡದೆ ಸದನವನ್ನು ಮುಂದೂಡಿದರು. ಕಳೆದ ವಾರವೂ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು.

‘ಇಲ್ಲಿ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಮಾತನಾಡಲು ಅವಕಾಶ ಕೊಡಿ ಎಂದು ಕೇಳಿದರೂ ಅವರು (ಸ್ಪೀಕರ್) ಓಡಿ ಹೋದರು. ಇದು ಸದನವನ್ನು ನಡೆಸುವ ರೀತಿಯಲ್ಲ. ಅವರು ನನ್ನ ಬಗ್ಗೆ ಆಧಾರರಹಿತವಾದದ್ದನ್ನು ಏನೋ ಹೇಳಿದರು. ಅಗತ್ಯ ಇಲ್ಲದಿದ್ದರೂ ಸದನವನ್ನು ಮುಂದೂಡಿದರು’ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು.

‘ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡಬೇಕು. ಆದರೆ ನಾನು ಮಾತನಾಡುವಾಗಲೆಲ್ಲಾ ನನ್ನನ್ನು ತಡೆಯಲಾಗುತ್ತಿದೆ. ನಾನು ಸುಮ್ಮನೇ ಕುಳಿತುಕೊಳ್ಳಬೇಕಾಯಿತು. ಇಲ್ಲಿ ಪ್ರಜಾಪ್ರಭುತ್ವಕ್ಕೆ ಅವಕಾಶವೇ ಇಲ್ಲ. ಮಹಾಕುಂಭಮೇಳ, ನಿರುದ್ಯೋಗದ ಬಗ್ಗೆ ನಾನು ಮಾತನಾಡಬೇಕೆಂದಿದ್ದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.