ADVERTISEMENT

ಎಸ್‌ಸಿ ಮೀಸಲಾತಿ; ಕೆನೆಪದರ ನೀತಿ ಅನ್ವಯ ಅಗತ್ಯ: ಸಿಜೆಐ ಬಿ.ಆರ್‌. ಗವಾಯಿ

ಪಿಟಿಐ
Published 16 ನವೆಂಬರ್ 2025, 13:27 IST
Last Updated 16 ನವೆಂಬರ್ 2025, 13:27 IST
<div class="paragraphs"><p>ಸಿಜೆಐ ಬಿ.ಆರ್‌.ಗವಾಯಿ</p></div>

ಸಿಜೆಐ ಬಿ.ಆರ್‌.ಗವಾಯಿ

   

ಅಮರಾವತಿ(ಆಂಧ್ರಪ್ರದೇಶ): ‘ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡುವ ವೇಳೆ ಕೆನೆಪದರ ನೀತಿಯನ್ನು ಅನ್ವಯಿಸಬೇಕು. ಇದನ್ನು ಈಗಲೂ ನಾನು ಬೆಂಬಲಿಸುತ್ತೇನೆ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ ಭಾನುವಾರ ಹೇಳಿದ್ದಾರೆ.

‘ಮೀಸಲಾತಿ ವಿಚಾರದಲ್ಲಿ, ಬಡ ಕೃಷಿ ಕೂಲಿಕಾರ್ಮಿಕನ ಮಕ್ಕಳು ಹಾಗೂ ಐಎಎಸ್‌ ಅಧಿಕಾರಿಯೊಬ್ಬನ ಮಕ್ಕಳನ್ನು ಸಮಾನವಾಗಿ ಕಾಣಲು ಸಾಧ್ಯ ಇಲ್ಲ’ ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,ಇಂದ್ರಾ ಸಾಹ್ನಿ ವರ್ಸಸ್ ಕೇಂದ್ರ ಸರ್ಕಾರ ಪ್ರಕರಣದಲ್ಲಿ ಉಲ್ಲೇಖಿಸಲಾದ ಕೆನೆಪದರ ನೀತಿಯನ್ನು ಪ್ರಸ್ತಾಪಿಸಿ, ತಮ್ಮ ವಾದವನ್ನು ಸಮರ್ಥಿಸಿಕೊಂಡರು.

‘ಈ ಪ್ರಕರಣದಲ್ಲಿ ಹೇಳಿರುವಂತೆ, ಒಬಿಸಿಗಳಿಗೆ ಮೀಸಲಾತಿ ನೀಡುವಾಗ ಕೆನೆಪದರ ನೀತಿಯನ್ನು ಅನ್ವಯಿಸಲಾಗುತ್ತಿದೆ. ಅದೇ ರೀತಿ ಪರಿಶಿಷ್ಟ ಜಾತಿಗಳಿಗೆ ನೀಡುವ ಮೀಸಲಾತಿಯಲ್ಲಿ ಕೂಡ ಈ ನೀತಿಯನ್ನು ಅನ್ವಯಿಸಬೇಕು. ಈ ವಿಚಾರವಾಗಿ ನಾನು ನೀಡಿದ ತೀರ್ಪಿಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು’ ಎಂದು ಸಿಜೆಐ ಗವಾಯಿ ಹೇಳಿದರು.

‘ಭಾರತದ ಸಂವಿಧಾನ ಸ್ಥಿರವಲ್ಲ. ಡಾ.ಬಿ.ಆರ್‌.ಅಂಬೇಡ್ಕರ್‌ ಯಾವಾಗಲೂ ಈ ಮಾತನ್ನು ಹೇಳುತ್ತಿದ್ದರು. ಸಂವಿಧಾನವು ವಿಕಾಸ ಹೊಂದುತ್ತಿರುವ, ಸುವ್ಯವಸ್ಥಿತವಾದ ಜೀವಂತ ದಾಖಲೆಯಾಗಿದೆ. ಸಂವಿಧಾನಕ್ಕೆ ತಿದ್ದುಪಡಿ ತರುವುದಕ್ಕೆ 368ನೇ ವಿಧಿಯಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ನಿವೃತ್ತಿಗೂ ಮುನ್ನ ನಾನು ಪಾಲ್ಗೊಳ್ಳುತ್ತಿರುವ ಕೊನೆಯ ಕಾರ್ಯಕ್ರಮ ಆಂಧ್ರಪ್ರದೇಶದ ಅಮರಾವತಿಯಲ್ಲಿ ನಡೆಯುತ್ತಿದೆ. ನಾನು ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಪಾಲ್ಗೊಂಡಿದ್ದ ಮೊದಲ ಕಾರ್ಯಕ್ರಮ ನನ್ನ ಸ್ವಂತ ಊರಾದ, ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿತ್ತು’ ಎಂದು ಹೇಳಿದರು.

ಈ ಹಿಂದೆಯೂ ಹೇಳಿದ್ದ ಸಿಜೆಐ: ‘ಪರಿಶಿಷ್ಟ ಜಾತಿ(ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾತಿ ನೀಡುವಾಗ ಕೆನೆಪದರು ಗುರುತಿಸುವುದಕ್ಕೆ ಸಂಬಂಧಿಸಿ ನೀತಿಯೊಂದರನ್ನು ರೂಪಿಸಬೇಕು. ಆ ಮೂಲಕ ಇದರ ವ್ಯಾಪ್ತಿಗೆ ಒಳಪಡುವವರಿಗೆ ಮೀಸಲಾತಿಯನ್ನು ನಿರಾಕರಿಸಬೇಕು ಎಂದು ಸಿಜೆಐ ಗವಾಯಿ ಅವರು ಕಳೆದ ವರ್ಷ ಹೇಳಿದ್ದರು.

ದೇಶದಲ್ಲಿ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಸಾಕಾರಗೊಳ್ಳುತ್ತಿದೆ. ಈ ವಿಚಾರದಲ್ಲಿ ತೋರಲಾಗುತ್ತಿರುವ ತಾರತಮ್ಯಕ್ಕೆ ಖಂಡನೆಯೂ ವ್ಯಕ್ತವಾಗುತ್ತಿದೆ.
ಬಿ.ಆರ್‌. ಗವಾಯಿ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.