ADVERTISEMENT

ಎಚ್‌–1ಬಿ ವೀಸಾ: ತ್ವರಿತ ಕ್ರಮಕ್ಕೆ ತೆಲಂಗಾಣ ಸಿಎಂ ಎ.ರೇವಂತ್‌ ರೆಡ್ಡಿ ಆಗ್ರಹ

ಪಿಟಿಐ
Published 21 ಸೆಪ್ಟೆಂಬರ್ 2025, 14:12 IST
Last Updated 21 ಸೆಪ್ಟೆಂಬರ್ 2025, 14:12 IST
<div class="paragraphs"><p>ರೇವಂತ್ ರೆಡ್ಡಿ</p></div>

ರೇವಂತ್ ರೆಡ್ಡಿ

   

ಹೈದರಾಬಾದ್‌ : ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಎಚ್‌–1ಬಿ ವೀಸಾ ಅರ್ಜಿಯ ವಾರ್ಷಿಕ ಶುಲ್ಕವನ್ನು ಹೆಚ್ಚಿಸಿರುವುದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಯುದ್ಧೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು‘ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ಆಗ್ರಹಿಸಿದ್ದಾರೆ. 

‘ಎಚ್‌–1ಬಿ ವೀಸಾ ಅರ್ಜಿಯ ವಾರ್ಷಿಕ ಶುಲ್ಕ ಹೆಚ್ಚಳದಿಂದ ತೆಲುಗು ಐಟಿ ವೃತ್ತಿಪರರಿಗೆ ಆಗಿರುವ ನೋವನ್ನು ಊಹಿಸಲೂ ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಸೌಹಾರ್ದದಿಂದ ಪರಿಹರಿಸಬೇಕು’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ADVERTISEMENT

‘ಶುಲ್ಕ ಹೆಚ್ಚಿಸುವ ಟ್ರಂಪ್ ಅವರ ಆದೇಶವು ಆಘಾತಕಾರಿಯಾಗಿದೆ. ಭಾರತ–ಅಮೆರಿಕ ನಡುವಿನ ಐತಿಹಾಸಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕ್ರಮವು ಸ್ವೀಕಾರಾರ್ಹವಲ್ಲ’ ಎಂದೂ ಅವರು ಹೇಳಿದ್ದಾರೆ. 

‘ಅಮೆರಿಕಕ್ಕಾಗಿ ವರ್ಷಗಳಿಂದ ಕೆಲಸ ಮಾಡುತ್ತಿರುವ ನಮ್ಮ ದೇಶದ ಅಪಾರ ಸಂಖ್ಯೆಯ ಐಟಿ ವೃತ್ತಿಪರರು, ಕೌಶಲ ಆಧಾರಿತ ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ. 

ಎಚ್‌–1ಬಿ ವೀಸಾದ ದುರ್ಬಳಕೆಯು ರಾಷ್ಟ್ರೀಯ ಭದ್ರತೆಗೆ ಆತಂಕಕಾರಿ ಎಂದಿರುವ ಟ್ರಂಪ್‌, ಅರ್ಜಿಗೆ ಸಂಬಂಧಿಸಿದ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಅಂದಾಜು ₹88 ಲಕ್ಷ) ಹೆಚ್ಚಿಸುವ ಆದೇಶಕ್ಕೆ ಶುಕ್ರವಾರ ಸಹಿ ಹಾಕಿದ್ದರು. ಅಮೆರಿಕಕ್ಕೆ ವಲಸೆಯೇತರ ಕಾರ್ಮಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ಶುಲ್ಕ ಹೆಚ್ಚಳ ಮಾಡುತ್ತಿರುವುದಾಗಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.