ADVERTISEMENT

ಮುಖ್ಯಮಂತ್ರಿ ರೇವಂತ ರೆಡ್ಡಿ ಶೀಘ್ರ ಬಿಜೆಪಿಗೆ: ಕೆಟಿಆರ್‌ ಸ್ಫೋಟಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 15:57 IST
Last Updated 17 ಆಗಸ್ಟ್ 2024, 15:57 IST
<div class="paragraphs"><p>ಕೆ.ಟಿ.ರಾಮರಾವ್‌</p></div>

ಕೆ.ಟಿ.ರಾಮರಾವ್‌

   

ಹೈದರಾಬಾದ್‌: ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ತಮ್ಮ ಮುಂದಿನ ರಾಜಕೀಯ ನಡೆಯು ಬಿಜೆಪಿಯತ್ತ ಇರಬಹುದು ಎಂದು ನಿಕಟವರ್ತಿಗಳ ಬಳಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ ಎಂದು ಬಿಆರ್‌ಎಸ್‌ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್‌ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ರೇವಂತ ರೆಡ್ಡಿ ತಮ್ಮ ಬಣದೊಂದಿಗೆ ಶೀಘ್ರವೇ ಬಿಜೆಪಿ ಸೇರಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಮೋದಿ ಅವರ ಬಳಿ ರೇವಂತ ರೆಡ್ಡಿ ಅವರು ‘ಎಬಿವಿಪಿ ಮೂಲಕ ರಾಜಕೀಯ ಜೀವನ ಆರಂಭಿಸಿದೆ ಮತ್ತು ರಾಜಕೀಯ ಜೀವನದ ಅಂತ್ಯವೂ ಕೇಸರಿ ಪಕ್ಷದಲ್ಲಿಯೇ ಆಗಲಿದೆ’ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಲಿ’ ಎಂದು ಸವಾಲು ಹಾಕಿದರು.

ಬಿಆರ್‌ಎಸ್‌ ಕಾರ್ಯಕರ್ತರಿಂದ ಪ್ರತಿಭಟನೆ: 

ಪಕ್ಷದ ಶಾಸಕ ಮತ್ತು ಮಾಜಿ ಸಚಿವ ಟಿ.ಹರೀಶ್‌ ರಾವ್‌ ಅವರ ಕ್ಯಾಂಪ್‌ ಕಚೇರಿ ಮೇಲೆ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿದ್ದನ್ನು ಖಂಡಿಸಿ ಬಿಆರ್‌ಎಸ್‌ ಕಾರ್ಯಕರ್ತರು ಸಿದ್ದಿಪೇಟ್‌ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಹರೀಶ್‌ ರಾವ್‌ ಅವರು, ‘ಕಾಂಗ್ರೆಸ್‌ ಪಕ್ಷದ ಗೂಂಡಾಗಳು ಶಾಸಕರ ಕಚೇರಿ ಮೇಲೆ ನಡುರಾತ್ರಿ ದಾಳಿ ನಡೆಸಿದ್ದಾರೆ. ಇದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಸಂಕೇತ. ಬೀಗವನ್ನು ಒಡೆದು, ವಸ್ತುಗಳನ್ನು ಜಖಂಗೊಳಿಸಿದ್ದಾರೆ. ಪೊಲೀಸರು ದಾಳಿಯನ್ನು ತಡೆಯುವುದನ್ನು ಬಿಟ್ಟು ಕಿಡಿಗೇಡಿಗಳನ್ನು ರಕ್ಷಿಸುತ್ತಿದ್ದಾರೆ. ಶಾಸಕರ ಕಚೇರಿಯನ್ನೇ ಧ್ವಂಸಗೊಳಿಸಿದ್ದಾರೆ ಎಂದಾದರೆ ಇನ್ನು ಜನಸಾಮಾನ್ಯರ ರಕ್ಷಣೆ ಎಲ್ಲಿದೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.