ADVERTISEMENT

ಅದಾನಿ ನಿಯೋಗದ ಜತೆ ಸಿಎಂ ರೇವಂತ್‌ ರೆಡ್ಡಿ ಮಾತುಕತೆ: ತೆಲಂಗಾಣದಲ್ಲಿ ವಿವಾದ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 2:33 IST
Last Updated 6 ಜನವರಿ 2024, 2:33 IST
<div class="paragraphs"><p>ರೇವಂತ್ ರೆಡ್ಡಿ</p></div>

ರೇವಂತ್ ರೆಡ್ಡಿ

   

– ಪಿಟಿಐ ಚಿತ್ರ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಇತ್ತೀಚೆಗೆ ಅದಾನಿ ಸಮೂಹದ ನಿಯೋಗದೊಂದಿಗೆ ಸಭೆ ನಡೆಸಿದ್ದು, ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದೆ.

ADVERTISEMENT

ಅದಾನಿ ಬೆಳವಣಿಗೆಗೆ ಕೇಂದ್ರ ಸರ್ಕಾರದ ಸಹಾಯವೇ ಕಾರಣ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನಡೆಸುತ್ತಿರುವ ಆರೋಪದ ನೈಜತೆ ಬಗ್ಗೆ ಬಿಜೆಪಿ ಪ್ರಶ್ನೆ ಮಾಡಿದೆ.

ಬುಧವಾರ ಅದಾನಿ ಸಮೂಹದ ನಿಯೋಗವೊಂದರ ಜತೆ ರೇವಂತ್ ರೆಡ್ಡಿ ಸಭೆ ನಡೆಸಿದ್ದರು. ರಾಜ್ಯದಲ್ಲಿ ಕೈಗಾರಿಕೆ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಠಿಗೆ ಬೇಕಾದ ವ್ಯವಸ್ಥೆಗಳು, ಮೂಲಭೂತ ಸೌಕರ್ಯಗಳು ಹಾಗೂ ಸಬ್ಸಿಡಿಗಳನ್ನು ನೀಡುವುದಾಗಿ ನಿಯೋಗಕ್ಕೆ ಆಶ್ವಾಸನೆ ನೀಡಿದ್ದರು. ಅಲ್ಲದೇ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಆಹ್ವಾನವನ್ನೂ ನೀಡಿದ್ದರು.

ದತ್ತಾಂಶ ಕೇಂದ್ರ ಹಾಗೂ ಬಾಹ್ಯಾಕಾಶ ಪಾರ್ಕ್ ಸ್ಥಾಪನೆ ಸಂಬಂಧ ನಿಯೋಗದ ಜತೆ ಮಾತುಕತೆ ನಡೆಸಲಾಗಿತ್ತು.

ಮುಖ್ಯಮಂತ್ರಿಗಳ ಈ ಸಭೆಯನ್ನು ಬಿಜೆಪಿ ಟೀಕೆ ಮಾಡಿದೆ. ಇದು ಕಾಂಗ್ರೆಸ್‌ನ ಇಬ್ಬಗೆ ನೀತಿ ಎಂದು ಟೀಕಿಸಿದೆ.

‘ತಮ್ಮ ವ್ಯವಹಾರ ಉದ್ದೇಶಗಳಿಗಾಗಿ ಶಾರ್ಟ್ ಸೆಲ್ಲರ್ ಕಂ‍ಪನಿಯೊಂದು ಅದಾನಿ ಸಮೂಹದ ವಿರುದ್ಧ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಕೂಡಲೇ ರಾಹುಲ್ ಗಾಂಧಿ, ಅದಾನಿ ಸಮೂಹ ಹಾಗೂ ಕೇಂದ್ರ ಸರ್ಕಾರಕ್ಕೆ ಸಂಬಂಧ ಕಲ್ಪಿಸಿದರು. ಆದರೆ ಆ ವರದಿಗೆ ಸುದ್ದಿ ಮಹತ್ವ ಇರಬಹುದು. ಆದರೆ ಪುರಾವೆಗಳು ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈಗ ಅದಾನಿ ಸಮೂಹದ ನಿಯೋಗದೊಂದಿಗೆ ರೇವಂತ್ ರೆಡ್ಡಿಯವರ ಸಭೆ ಬಗ್ಗೆ ರಾಹುಲ್ ಗಾಂಧಿ ಏನು ಹೇಳುತ್ತಾರೆ’ ಎಂದು ಬಿಜೆಪಿಯ ರಾಷ್ಟ್ರೀಯ ನಾಯಕ ಹಾಗೂ ಮಧ್ಯಪ್ರದೇಶದ ಉಸ್ತುವಾರಿ ಪಿ. ಮುರಳೀಧರ ರಾವ್ ಅವರು ಪ್ರಶ್ನಿಸಿದ್ದಾರೆ.

‘ತೆಲಂಗಾಣದಲ್ಲಿ ಹೂಡಿಕೆಗಾಗಿ ಕಾಂಗ್ರೆಸ್ ಸರ್ಕಾರವು ಅದಾನಿ ಸಮೂಹದ ಜತೆ ಮಾತುಕತೆ ನಡೆಸುತ್ತದೆ. ಆದರೆ ಬೇರೆ ರಾಜ್ಯಗಳಲ್ಲಿ ಲೂಟಿ ಆರೋಪ ಮಾಡುತ್ತದೆ. ಇದು ಕಾಂಗ್ರೆಸ್‌ನ ಇಬ್ಬಗೆ ನೀತಿಯಲ್ಲವೇ? ಇದು ತೆಲಂಗಾಣದಲ್ಲಿ ಮಾತ್ರವಲ್ಲ. ಈ ಹಿಂದೆ ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಕೂಡ ಕಾಂಗ್ರೆಸ್ ಸರ್ಕಾರಗಳು ಹೂಡಿಕೆಗಾಗಿ ಅದಾನಿ ಸಮೂಹದ ಜತೆ ಒಪ್ಪಂದ ಮಾಡಿಕೊಂಡಿದ್ದವು’ ಎಂದು ಅವರು ಹೇಳಿದ್ದಾರೆ.

ರೇವಂತ್ ರೆಡ್ಡಿಯವರು ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಜತೆ ಒಪ್ಪಂದ ಹಾಗೂ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಇದೇ ಕಾರಣಕ್ಕೆ ಕಾಳೇಶ್ವರಂ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ತನಿಖೆಯನ್ನು ಸಿಬಿಐಗೆ ವಹಿಸುತ್ತಿಲ್ಲ. ವಿಧಾನಸಭೆಯ ಚುನಾವಣಾ ಪ್ರಚಾರದ ವೇಳೆ ಸಿಬಿಐಗೆ ಒಪ್ಪಿಸುವುದಾಗಿ ರೇವಂತ್ ರೆಡ್ಡಿ ಹೇಳಿದ್ದರು ಎಂದು ರಾವ್‌ ಹೇಳಿದ್ದಾರೆ.

ಫಾರ್ಮಾ ಸಿಟಿ ಪ್ರಸ್ತಾವನೆಯನ್ನು ಅಧಿಕಾರಕ್ಕೆ ಬಂದ 20 ದಿನಗಳಲ್ಲಿ ಹಿಂಪಡೆಯಲಾಗುವುದು ಎಂದಿದ್ದಾರೆ. ಆದರೆ ಅದರಿಂದಲೂ ರೇವಂತ್‌ ರೆಡ್ಡಿ ಹಿಂದೆ ಸರಿದ್ದಾರೆ. ಅಲ್ಲದೆ ಮುಂಬರುವ ಲೋಕಸಭೆ ಚುನಾವಣೆಗೆ ತೆಲಂಗಾಣವು ಕಾಂಗ್ರೆಸ್‌ಗೆ ಹಣದ ಮೂಲವಾಗಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.