ಮುಂಬೈ: ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲು ನಿರಾಕರಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ವಾಗ್ದಾಳಿ ನಡೆಸಿದ್ದು, ಸಂಸತ್ತು ಅಂಗೀಕರಿಸಿದ ಕಾನೂನನ್ನು ರಾಜ್ಯವು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲವು ದಾರಿ ತಪ್ಪಿರುವ ಮುಸ್ಲಿಮರು ಮತ್ತು ರಾಜಕಾರಣಿಗಳು ವೋಟ್‌ಬ್ಯಾಂಕ್ ತುಷ್ಟೀಕರಣದಲ್ಲಿ ತೊಡಗಿದ್ದಾರೆ. ಸರ್ಕಾರ ಶೀಘ್ರದಲ್ಲೇ ಈ ಅಂಶಗಳನ್ನು ಬಹಿರಂಗಪಡಿಸಲಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ. ಅಲ್ಪಸಂಖ್ಯಾತರು ಮತ್ತು ಅವರ ಆಸ್ತಿಗಳನ್ನು ರಕ್ಷಿಸುವುದಾಗಿ ಮಮತಾ ಬ್ಯಾನರ್ಜಿ ಈ ಹಿಂದೆ ಹೇಳಿದ್ದರು.
ಬ್ಯಾನರ್ಜಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಿರಣ್ ರಿಜಿಜು, ‘ನಾವು ಒಕ್ಕೂಟ ರಚನೆಯಡಿಯಲ್ಲಿ ಕೆಲಸ ಮಾಡುತ್ತೇವೆ. ಅವರು ಸೈದ್ಧಾಂತಿಕವಾಗಿ ಕಾಯ್ದೆಯನ್ನು ವಿರೋಧಿಸಬಹುದು. ಆದರೆ, ಸಂಸತ್ತು ಅಂಗೀಕರಿಸಿದ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.
‘ಬಡ ಮುಸ್ಲಿಮರನ್ನು ಲೂಟಿ ಮಾಡಿದ ಮತ್ತು ಕಾನೂನಿನ ನಿಬಂಧನೆಗಳ ಬಗ್ಗೆ ಅವರನ್ನು ದಾರಿ ತಪ್ಪಿಸಿದವರನ್ನು ನಾವು ಶೀಘ್ರದಲ್ಲೇ ಬಹಿರಂಗಪಡಿಸುತ್ತೇವೆ. ವೋಟ್‌ಬ್ಯಾಂಕ್ ತುಷ್ಟೀಕರಣದಲ್ಲಿ ತೊಡಗಿರುವ ಕೆಲವು ರಾಜಕಾರಣಿಗಳು, ವಕ್ಫ್ ಕಾಯ್ದೆಯಿಂದ ಮುಸ್ಲಿಮರು ತಮ್ಮ ಮಸೀದಿಗಳನ್ನು ಕಳೆದುಕೊಳ್ಳುತ್ತಾರೆ ಮತ್ತು ಅವರ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂಬ ಸುಳ್ಳುಗಳನ್ನು ಹರಡುತ್ತಿದ್ದಾರೆ. ಅಂತಹ ಸುಳ್ಳುಗಳನ್ನು ಹೇಳುವುದು ಪಾಪ’ ಎಂದು ರಿಜಿಜು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.