
ನರೇಂದ್ರ ಮೋದಿ ಹಾಗೂ ಜೈರಾಮ್ ರಮೇಶ್
ಪಿಟಿಐ ಚಿತ್ರಗಳು
ನವದೆಹಲಿ: ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಆದಾಗ್ಯೂ ಪ್ರಧಾನಿ ನರೇಂದ್ರ ಮೋದಿ ಅವರು, ಸಮಸ್ಯೆ ಬಗೆಹರಿಸುವ ಬದಲು ಚುನಾವಣಾ ಗುಂಗಿನಲ್ಲಿ ಮುಳುಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಇಂದು (ನವೆಂಬರ್ 6) ಆರೋಪ ಮಾಡಿದ್ದಾರೆ. 'ಕಳೆದ 11 ವರ್ಷಗಳ ದುರಾಡಳಿತ' ಸಮಾಜದ ಎಲ್ಲ ವರ್ಗದ ಮೇಲೆ ಪರಿಣಾಮ ಬೀರಿದೆ ಎಂದು ಟೀಕಿಸಿದ್ದಾರೆ.
'ವಿದ್ಯಾರ್ಥಿಗಳು, ಯುವಕರು, ರೈತರು, ಕಾರ್ಮಿಕರು, ವರ್ತಕರು, ಉದ್ಯೋಗಿಗಳು, ಉದ್ಯಮಿಗಳು ಸೇರಿದಂತೆ ಯಾವ ಒಂದೇ ಒಂದು ವರ್ಗದವರೂ ಈ ಸರ್ಕಾರದ ಅವಧಿಯಲ್ಲಿ ಸಂತಸದಿಂದ ಇಲ್ಲ. ಹಣದುಬ್ಬರ ಗಗನ್ಕೇರುತ್ತಿದ್ದರೆ, ರೂಪಾಯಿ ದರ ನಿರಂತರವಾಗಿ ಕುಸಿಯುತ್ತಿದೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಸತತವಾಗಿ ವಿಸ್ತಾರಗೊಳ್ಳುತ್ತಿರುವುದು, ಬಡವರು ಮತ್ತು ಮಧ್ಯಮ ವರ್ಗದವರ ಜೀವನ ಕಠಿಣವಾಗಿಸುತ್ತಿದೆ' ಎಂದು ದೂರಿದ್ದಾರೆ.
'ಸದ್ಯ, ನಿರುದ್ಯೋಗದ ಪ್ರಮಾಣ ಏರಿಕೆಯಾಗುತ್ತಿರುವುದು ಗಂಭೀರ ಕಳವಳಗಳನ್ನು ಸೃಷ್ಟಿಸಿದೆ' ಎಂದಿರುವ ಕಾಂಗ್ರೆಸ್ ನಾಯಕ, ಇತ್ತೀಚೆಗೆ ಬಿಡುಗಡೆಯಾದ ಸಿಎಂಐಇ ವರದಿ ಉಲ್ಲೇಖಿಸಿ, 2025ರ ಅಕ್ಟೋಬರ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ 7.5ರಷ್ಟಕ್ಕೆ ಏರಿದೆ. ಇದು ಕಳೆದ ಆರು ತಿಂಗಳಲ್ಲೇ ಗರಿಷ್ಠ ಮಟ್ಟವಾಗಿದೆ ಎಂದು ಒತ್ತಿ ಹೇಳಿದ್ದಾರೆ.
'ವಿವಿಧ ಕ್ಷೇತ್ರಗಳಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನಿರ್ಮಾಣ ಕ್ಷೇತ್ರದಲ್ಲಿ 90 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ' ಎನ್ನುತ್ತಲೇ, ಕಳೆದ 11 ವರ್ಷಗಳಿಂದಲೂ ಇದೇ ರೀತಿಯ ಅಂಕಿ–ಅಂಶಗಳು ಹೊರಹೊಮ್ಮುತ್ತಲೇ ಇವೆ ಎಂದು ಗುಡುಗಿದ್ದಾರೆ.
'ಹೀಗಿದ್ದರೂ, ಪ್ರಧಾನಿ ಮೋದಿ ಅವರಿಗೆ ದೇಶದ ಯುವಕರ ಬಗ್ಗೆ ಕಾಳಜಿ ಇದ್ದಂತಿಲ್ಲ. ಚುನಾವಣೆಗಳ ಗುಂಗಿನಲ್ಲೇ ಇರುವ ಅವರು, ನಿರುದ್ಯೋಗ ಸಮಸ್ಯೆ ಪರಿಹರಿಸುವ ಬದಲು, ಸಾರ್ವಜನಿಕರ ಗಮನ ಬೇರೆಡೆಗೆ ಸೆಳೆಯಲು ಹೊಸ ಹೊಸ ರೀತಿಯಲ್ಲಿ ಭಾಷಣಗಳನ್ನು ಮಾಡುವುದರಲ್ಲಿ ನಿರತರಾಗಿದ್ದಾರೆ' ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.