ADVERTISEMENT

ಎನ್‌ಡಿಎಯನ್ನು ಜೆಡಿಯು ತೊರೆದರೆ ಬೆಂಬಲಿಸದೆ ಬೇರೆ ಆಯ್ಕೆ ಏನಿದೆ?: ಆರ್‌ಜೆಡಿ

ಕುತೂಹಲ ಮೂಡಿಸಿದ ಬಿಹಾರ ರಾಜಕಾರಣ l ಎನ್‌ಡಿಎಯನ್ನು ಜೆಡಿಯು ತೊರೆಯುವ ಸಾಧ್ಯತೆ

ಪಿಟಿಐ
Published 9 ಆಗಸ್ಟ್ 2022, 6:12 IST
Last Updated 9 ಆಗಸ್ಟ್ 2022, 6:12 IST
ಪಟ್ನಾದಲ್ಲಿ ಭಾನುವಾರ ನಡೆದಿದ್ದ ‘ಬಿಹಾರ ವಸ್ತುಸಂಗ್ರಹಾಲಯ ಸಂಸ್ಥಾಪನಾ ದಿನಾಚರಣೆ’ ಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್. ಕೋವಿಡ್‌ ಸೋಂಕಿನ ನೆಪ ಹೇಳಿ ನೀತಿ ಆಯೋಗದ ಭಾನುವಾರದ ಸಭೆಗೆ ಗೈರುಹಾಜರಾಗಿದ್ದ ನಿತೀಶ್ ಕುಮಾರ್ ಅವರು, ಅದೇ ದಿನ ರಾಜ್ಯ ಸರ್ಕಾರದ ಬೇರೆ ಎರಡು ಕಾರ್ಯಕ್ರಮಗಳಲ್ಲಿ ಹಾಜರಿದ್ದರು –ಪಿಟಿಐ ಚಿತ್ರ
ಪಟ್ನಾದಲ್ಲಿ ಭಾನುವಾರ ನಡೆದಿದ್ದ ‘ಬಿಹಾರ ವಸ್ತುಸಂಗ್ರಹಾಲಯ ಸಂಸ್ಥಾಪನಾ ದಿನಾಚರಣೆ’ ಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್. ಕೋವಿಡ್‌ ಸೋಂಕಿನ ನೆಪ ಹೇಳಿ ನೀತಿ ಆಯೋಗದ ಭಾನುವಾರದ ಸಭೆಗೆ ಗೈರುಹಾಜರಾಗಿದ್ದ ನಿತೀಶ್ ಕುಮಾರ್ ಅವರು, ಅದೇ ದಿನ ರಾಜ್ಯ ಸರ್ಕಾರದ ಬೇರೆ ಎರಡು ಕಾರ್ಯಕ್ರಮಗಳಲ್ಲಿ ಹಾಜರಿದ್ದರು –ಪಿಟಿಐ ಚಿತ್ರ   

ಪಟ್ನಾ: ‘ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಜೆಡಿಯು ತೊರೆಯುವುದಾದರೆ, ಅವರ ಜತೆ ಕೈಜೋಡಿಸುವುದನ್ನು ಬಿಟ್ಟು ನಮ್ಮ ಎದುರು ಬೇರೆ ಯಾವ ಆಯ್ಕೆ ಇದೆ?’ ಜೆಡಿಯುಗೆ ಬೆಂಬಲ ಸೂಚಿಸುತ್ತೇವೆ ಎಂಬುದನ್ನು ಆರ್‌ಜೆಡಿ ಹೇಳಿರುವ ಬಗೆ ಇದು.

ಬಿಜೆಪಿ ಮತ್ತು ಜೆಡಿಯು ಮಧ್ಯೆ ಸಂಬಂಧ ಹಳಸಿದ ಬೆನ್ನಲ್ಲೇ ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣಗಳು ಮುನ್ನೆಲೆಗೆ ಬರುತ್ತಿವೆ. ಆರ್‌ಜೆಡಿ ತನ್ನ ಎಲ್ಲಾ ಶಾಸಕರಿಗೆ ಪಟ್ನಾಕ್ಕೆ ಬರುವಂತೆ ಸೂಚಿಸಿದೆ. ಜೆಡಿಯು ಮುಖಂಡರು ಸಹ ತಮ್ಮ ಶಾಸಕರ ಜತೆಗೆ ಫೋನ್‌ನಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ ಸಹ ಪಟ್ನಾಗೆ ಬರುವಂತೆ ತನ್ನ ಎಲ್ಲಾ ಶಾಸಕರಿಗೆ ಸೂಚನೆ ನೀಡಿದೆ.

ಮಹಾರಾಷ್ಟ್ರದ ಶಿವಸೇನಾದಲ್ಲಿ ಒಡಕು ಮೂಡಿಸಿ, ಸರ್ಕಾರ ಬದಲಿಸಿದ ರೀತಿಯಲ್ಲಿಯೇ ಬಿಹಾರದಲ್ಲೂ ಸರ್ಕಾರ ಬದಲಿಸಲು ಬಿಜೆಪಿ ಸಂಚುಹೂಡಿದೆ. ಇದಕ್ಕಾಗಿ ಜೆಡಿಯುನಲ್ಲಿ ಒಡಕು ಮೂಡಿಸಲು ಸಿದ್ಧತೆ ನಡೆಸಿದೆ ಎಂದು ಜೆಡಿಯು ನಾಯಕರು ಆರೋಪಿಸಿದ್ದಾರೆ. ಬಿಜೆಪಿ ಬಗೆಗಿನ ಅಸಮಾಧಾನವನ್ನು ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಹಲವು ಬಾರಿ ಬಹಿರಂಗವಾಗಿಯೇ ಹೊರಹಾಕಿದ್ದಾರೆ.

ADVERTISEMENT

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಬೀಳ್ಕೊಡುಗೆ ಸಮಾರಂಭಕ್ಕೆ, ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ನಿತೀಶ್ ಗೈರು ಹಾಜರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನೀತಿ ಆಯೋಗವು ಭಾನುವಾರ ನಡೆಸಿದ ಮುಖ್ಯಮಂತ್ರಿಗಳ ಸಭೆಗೂ ನಿತೀಶ್‌ ಹಾಜರಾಗಿರಲಿಲ್ಲ.

ಬೆಲೆ ಏರಿಕೆ ವಿರುದ್ಧ ಆರ್‌ಜೆಡಿ ಈಚೆಗೆ ನಡೆಸಿದ್ದ ಪ್ರತಿಭಟನೆಯನ್ನು ಜೆಡಿಯು ಬೆಂಬಲಿಸಿತ್ತು. ಈಗ ಎರಡೂ ಪಕ್ಷಗಳು ರಾಜ್ಯದ ರಾಜಕೀಯ ಸ್ಥಿತಿಯ ಬಗ್ಗೆ ಚರ್ಚಿಸಲು ಒಂದೇ ದಿನ ಸಭೆ ಕರೆದಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್‌ಜೆಡಿರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ ತಿವಾರಿ, ‘ಎರಡೂ ಪಕ್ಷಗಳು ಒಂದೇ ದಿನ ಸಭೆ ಕರೆದಿವೆ. ಎರಡೂ ಪಕ್ಷಗಳ ಬಲಾಬಲವು, ಸರಳ ಬಹುಮತ ಸಾಬೀತಿಗೆ ಸಾಕಾಗುತ್ತದೆ ಎಂಬುದು ಗಮನಿಸಬೇಕಾದ ಅಂಶ. ಚುನಾವಣೆ ಹತ್ತಿರದಲ್ಲಿ ಇಲ್ಲದೇ ಇರುವ ಸಂದರ್ಭದಲ್ಲಿ ಈ ಸಭೆಗಳು ಮಹತ್ವ ಪಡೆದುಕೊಂಡಿವೆ’ ಎಂದು ಹೇಳಿದ್ದಾರೆ.

ಪಕ್ಷಗಳ ಬಲಾಬಲ: ಜೆಡಿಯುನಲ್ಲಿ 45 ಶಾಸಕರಿದ್ದರೆ ಆರ್‌ಜೆಡಿಯಲ್ಲಿ 79 ಶಾಸಕರಿದ್ದಾರೆ, ಬಿಹಾರ ವಿಧಾನಸಭೆಯಲ್ಲೇ ಅತ್ಯಂತ ದೊಡ್ಡ ಪಕ್ಷ ಎನಿಸಿದೆ. ಎರಡೂ ಪಕ್ಷಗಳು ಒಟ್ಟಾದರೆ 124 ಶಾಸಕರ ಬಲ ಆ ಮೈತ್ರಿಗೆ ದೊರೆಯಲಿದೆ. ಇನ್ನು ಕಾಂಗ್ರೆಸ್‌ (19 ಶಾಸಕರು) ಮತ್ತು ಎಡಪಕ್ಷಗಳು (16 ಶಾಸಕರು) ಸಹ ಬೆಂಬಲ ನೀಡುವುದಾಗಿ ಹೇಳಿವೆ.

ಬಿಕ್ಕಟ್ಟಿಗೆ ಕಾರಣಗಳು...
‘ಜೆಡಿಯು ಅನ್ನು ಮುಗಿಸಲು ಬಿಜೆಪಿ ಸಂಚು ರೂಪಿಸುತ್ತಿದೆ’ ಎಂಬ ಆರೋಪವನ್ನು ಜೆಡಿಯು ಮಾಡಿದೆ. ಈ ಆತಂಕವೇ ಬಿಜೆಪಿಯಿಂದ ಜೆಡಿಯು ಅಂತರ ಕಾಯ್ದುಕೊಳ್ಳಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಆರ್‌‍ಸಿಪಿ ಸಿಂಗ್ ಅವರಿಗೆ ಬಿಜಿಪಿಯು ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡಿತ್ತು. ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಅವರ ಒಪ್ಪಿಗೆ ಪಡೆಯದೆಯೇ, ಬಿಜೆಪಿಯ ಅಮಿತ್ ಶಾ ಅವರು ಆರ್‌ಸಿಪಿ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಿದ್ದರು.ಅದನ್ನು, ಜೆಡಿಯುವನ್ನು ಹತ್ತಿಕ್ಕುವ ಯತ್ನ ಎಂದು ವಿಶ್ಲೇಷಿಸಲಾಗಿತ್ತು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಲನ್ ಹೇಳಿದ್ದಾರೆ.

ಹಾಗಾಗಿಯೇ ಆರ್‌ಸಿಪಿ ಸಿಂಗ್ ಅವರ ರಾಜ್ಯಸಭಾ ಅವಧಿ ಮುಗಿದರೂ, ಅವರ ಮರು ಆಯ್ಕೆಗೆ ಜೆಡಿಯು ಆಸಕ್ತಿ ವಹಿಸಲಿಲ್ಲ. ಆರ್‌ಸಿಪಿ ಸಿಂಗ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

15 ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ಕಾರ್ಯಕಾರಿಣಿಗಾಗಿ ಬಿಹಾರದಲ್ಲಿ ಇದ್ದರು. ಅಲ್ಲಿ ಅವರು, ‘ಬಿಜೆಪಿ ಮಾತ್ರವೇ ಉಳಿಯಲಿದೆ. ಬೇರೆಲ್ಲಾ ಪಕ್ಷಗಳು ಮರೆಯಾಗಲಿವೆ’ ಎಂದು ಹೇಳಿದ್ದರು. ಇದನ್ನು ಎಚ್ಚರಿಕೆ ಗಂಟೆ ಎಂದು ಜೆಡಿಯು ಪರಿಗಣಿಸಿದೆ. ಹಾಗಾಗಿ ಬಿಜೆಪಿಯಿಂದ ದೂರ ಕಾಯ್ದುಕೊಳ್ಳಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.