ADVERTISEMENT

ರೈಲ್ವೆಯ 5ನೇ ಹಂತದ ಹುದ್ದೆಗಳ ಪರೀಕ್ಷಾ ಫಲಿತಾಂಶ ನವೆಂಬರ್‌ 3ನೇ ವಾರದೊಳಗೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 5:34 IST
Last Updated 18 ನವೆಂಬರ್ 2022, 5:34 IST
.
.   

ನವದೆಹಲಿ: ರೈಲ್ವೆ ತಾಂತ್ರಿಕೇತರ ಹುದ್ದೆಗಳ ನೇಮಕಾತಿ ಸಂಬಂಧ ನಡೆದಿದ್ದ ಪರೀಕ್ಷೆಗಳ ಫಲಿತಾಂಶಗಳ ಪ್ರಕಟಣೆ ಸಂಬಂಧ ಭಾರತೀಯ ರೈಲ್ವೆಯು ವೇಳಾಪಟ್ಟಿ ನಿಗದಿಪಡಿಸಿದೆ.

ರೈಲ್ವೆ ಇಲಾಖೆ ಸಿದ್ಧಪಡಿಸಿರುವ ವೇಳಾಪಟ್ಟಿಯ ಪ್ರಕಾರ, ರೈಲ್ವೆಯ 5ನೇ ಹಂತದ ಹುದ್ದೆಗಳ ಪರೀಕ್ಷಾ ಫಲಿತಾಂಶ ನವೆಂಬರ್‌ ಮೂರನೇ ವಾರದೊಳಗೆ ಪ್ರಕಟವಾಗಲಿದೆ. ಈ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯು ಡಿಸೆಂಬರ್‌ ಎರಡನೇ ವಾರದಲ್ಲಿ ಪೂರ್ಣಗೊಳ್ಳಲಿದ್ದು, ಜನವರಿ ಮೂರನೇ ವಾರದೊಳಗೆ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

4ನೇ ಹಂತದ ಹುದ್ದೆಗಳ ಆಕಾಂಕ್ಷಿಗಳ ಫಲಿತಾಂಶವನ್ನು ಜನವರಿ ಎರಡನೇ ವಾರದಲ್ಲಿ ನೀಡಲಾಗುತ್ತದೆ. ಫೆಬ್ರುವರಿ ಮೊದಲ ವಾರದಲ್ಲಿ ಈ ಅಭ್ಯರ್ಥಿಗಳ ದಾಖಲೆ ಪರೀಶಿಲನೆ, ವೈದ್ಯಕೀಯ ಪರೀಕ್ಷೆ ನಡೆಸಿ, ಅದೇ ತಿಂಗಳ ನಾಲ್ಕನೇ ವಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ADVERTISEMENT

ಮೂರನೇ ಹಂತದ ಹುದ್ದೆಗಳ ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆ 2023ರ ಮಾರ್ಚ್‌ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದ್ದು, ಎರಡನೇ ಹಂತದ ಹುದ್ದೆಗಳ ಆಯ್ಕೆ ಪ್ರಕ್ರಿಯೆ 2023ರ ಮಾರ್ಚ್‌ ನಾಲ್ಕನೇ ವಾರದಲ್ಲಿ ಅಂತಿಮಗೊಳ್ಳಲಿದೆ.

ಇವುಗಳಲ್ಲಿ ಸ್ಟೇಷನ್ ಮಾಸ್ಟರ್‌ಗಳು, ಗೂಡ್ಸ್ ಗಾರ್ಡ್‌ಗಳು, ವಾಣಿಜ್ಯ ಅಪ್ರೆಂಟಿಸ್‌ಗಳು, ಟಿಕೆಟ್ ಕ್ಲರ್ಕ್‌ಗಳು, ಜೂನಿಯರ್ ಅಕೌಂಟ್ ಅಸಿಸ್ಟೆಂಟ್‌ಗಳು, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್‌ಗಳು ಮತ್ತು ಟೈಮ್‌ಕೀಪರ್‌ಗಳಂತಹ ಉದ್ಯೋಗಗಳು ಸೇರಿವೆ.

6ನೇ ಹಂತದ 7,124 ಹುದ್ದೆಗಳ ಫಲಿತಾಂಶ ಸೆಪ್ಟೆಂಬರ್‌ನಲ್ಲಿ ಪ್ರಕಟಿಸಲಾಗಿದ್ದು, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ ಎಂದು ರೈಲ್ವೆ ತಿಳಿಸಿದೆ.

ಈ ವರ್ಷದ ತಾಂತ್ರಿಕೇತರ ಹುದ್ದೆಗಳ ಪರೀಕ್ಷೆಗಳಲ್ಲಿ ಆಯ್ಕೆಯಾದ 35,281 ಅಭ್ಯರ್ಥಿಗಳಿಗೆ 2023ರ ಮಾರ್ಚ್ ಅಂತ್ಯದೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.