ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಇ.ಡಿ ವಿಚಾರಣೆಗೆ ಹಾಜರಾದ ರಾಬರ್ಟ್‌ ವಾದ್ರಾ

ಪಿಟಿಐ
Published 14 ಜುಲೈ 2025, 6:34 IST
Last Updated 14 ಜುಲೈ 2025, 6:34 IST
ರಾಬರ್ಟ್‌ ವಾದ್ರಾ
ರಾಬರ್ಟ್‌ ವಾದ್ರಾ   

ನವದೆಹಲಿ: ಲಂಡನ್‌ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್‌ ಭಂಡಾರಿ ವಿರುದ್ಧ ದಾಖಲಿಸಿರುವ ಹಣ ಅಕ್ರಮ ವರ್ಗಾವಣೆಯ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ, ಉದ್ಯಮಿ ರಾಬರ್ಟ್‌ ವಾದ್ರಾ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಸೋಮವಾರ ಹಾಜರಾಗಿದ್ದರು. 

ಕೇಂದ್ರ ದೆಹಲಿಯಲ್ಲಿರುವ ಇ.ಡಿ ಕಚೇರಿಗೆ ಬೆಳಿಗ್ಗೆ 11ಕ್ಕೆ ವಾದ್ರಾ ಹಾಜರಾಗಿದ್ದರು. ಅವರೊಂದಿಗೆ ಪತ್ನಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಆಗಮಿಸಿದ್ದರು. ಅಕ್ರಮ ಹಣಕಾಸು ವರ್ಗಾವಣೆ (ತಡೆ) ಕಾಯ್ದೆ ಅನ್ವಯ ರಾಬರ್ಟ್‌ ಅವರ ಹೇಳಿಕೆಗಳನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಬರ್ಟ್‌ ಅವರ ಹೇಳಿಕೆಯನ್ನು ಆಧರಿಸಿ ಬಂಡಾರಿ ಪ್ರಕರಣದಲ್ಲಿ ಇ.ಡಿ ಹೊಸ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ ಎಂದೂ ತಿಳಿದುಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳೂ ಇ.ಡಿ ಎರಡು ಸಮನ್ಸ್‌ ಜಾರಿಗೊಳಿಸಿತ್ತು. ಆದರೆ, ರಾಬರ್ಟ್‌ ವಿದೇಶ ಪ್ರವಾಸದಲ್ಲಿದ್ದ ಕಾರಣ ವಿಚಾರಣೆಗೆ ಹಾಜರಾಗಿರಲಿಲ್ಲ.

ADVERTISEMENT

ರಾಬರ್ಟ್‌ ಅವರ ಸೂಚನೆ ಮೇರೆಗೆ ಬಂಡಾರಿ ಲಂಡನ್‌ನಲ್ಲಿ ಅಕ್ರಮವಾಗಿ ಆಸ್ತಿ ಖರೀದಿಸಿರುವ ಆರೋಪವಿದ್ದು, 2016ರಿಂದಲೂ ಬಂಡಾರಿ ಲಂಡನ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಬಂಡಾರಿ ಅವರನ್ನು ಹಲವು ಪ್ರಕರಣಗಳಲ್ಲಿ ಬೇಕಾಗಿರುವ ‘ಆರ್ಥಿಕ ಅಪರಾಧಿ’ ಎಂದು ದೆಹಲಿ ಕೋರ್ಟ್‌ ಇತ್ತೀಚೆಗಷ್ಟೇ ಘೋಷಣೆ ಮಾಡಿದೆ.

ಲಂಡನ್‌ನಲ್ಲಿ ಯಾವುದೇ ರೀತಿಯ ಆಸ್ತಿ ಹೊಂದಿಲ್ಲ ಎಂದು ವಾದ್ರಾ ಸ್ಪಷ್ಟಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.