ADVERTISEMENT

CM ರೇವಂತ್ ರೆಡ್ಡಿ ಭೇಟಿ ಮಾಡಿದ ರೋಹಿತ್ ವೇಮುಲ ತಾಯಿ: ನ್ಯಾಯಕ್ಕೆ ಮೊರೆ

ಪಿಟಿಐ
Published 4 ಮೇ 2024, 16:15 IST
Last Updated 4 ಮೇ 2024, 16:15 IST
<div class="paragraphs"><p>ಹೈದರಾಬಾದ್‌ನಲ್ಲಿ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರನ್ನು ರಾಧಿಕಾ ವೇಮುಲ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದರು</p></div>

ಹೈದರಾಬಾದ್‌ನಲ್ಲಿ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರನ್ನು ರಾಧಿಕಾ ವೇಮುಲ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದರು

   

ಪಿಟಿಐ ಚಿತ್ರ

ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಗನ ಸಾವಿಗೆ ನ್ಯಾಯ ದೊರಕಿಸುವಂತೆ ರೋಹಿತ್ ವೇಮುಲ ಅವರ ತಾಯಿ ರಾಧಿಕಾ ಅವರು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರನ್ನು ಶನಿವಾರ ಕೋರಿದ್ದಾರೆ.

ADVERTISEMENT

‘2016ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ಸಾವಿನ ಕುರಿತು ಪಾರದರ್ಶಕ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದು ರೋಹಿತ್ ಸೋದರ ರಾಜ ವೇಮುಲ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

‘ಪೊಲೀಸರು ಸಲ್ಲಿಸಿರುವ ಅಂತಿಮ ತನಿಖಾ ವರದಿಗೆ ನಮ್ಮ ಆಕ್ಷೇಪವಿದೆ. ರೋಹಿತ್ ಸಾವಿಗೆ ಕಾರಣವಾದ ಜಾತಿ ವಿಷಯವನ್ನು ದೃಢಪಡಿಸಬೇಕಿರುವುದು ಆಂಧ್ರಪ್ರದೇಶದ ಗುಂಟೂರಿನ ಜಿಲ್ಲಾಧಿಕಾರಿಯೇ ಹೊರತು, ಪೊಲೀಸರಲ್ಲ. ಇದನ್ನು ನಾವು ಹೇಳಿದ್ದೇವೆ. ಜತೆಗೆ ಕೆಲ ವಿದ್ಯಾರ್ಥಿಗಳ ವಿರುದ್ಧ  ತನಿಖೆಯನ್ನೇ ಪೊಲೀಸರು ಕೈಬಿಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೇ ರೋಹಿತ್ ಪರಿಶಿಷ್ಟ ಜಾತಿಗೆ ಸೇರಿದವನೇ ಅಲ್ಲ ಎಂದು ಅಂತಿಮ ವರದಿಯಲ್ಲಿ ಹೇಳಲಾಗಿದೆ’ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರಾಧಿಕಾ, ‘ನಾನು ದಲಿತೆ. ನನ್ನ ಮಗನೂ ಪರಿಶಿಷ್ಟ ಜಾತಿಗೆ ಸೇರಿದವನು. ಅವನ ಜಾತಿಯನ್ನು ನಿರ್ಧರಿಸುವ ಹಕ್ಕು ಪೊಲೀಸರಿಗೆ ಇಲ್ಲ. ತನಿಖೆ ಸಂದರ್ಭದಲ್ಲಿ ಪೊಲೀಸರು ಜಾತಿ ಕುರಿತು ಯಾವುದೇ ಪ್ರಶ್ನೆ ಕೇಳಲಿಲ್ಲ’ ಎಂದಿದ್ದಾರೆ.

‘ನನ್ನ ಮಗ ಸದಾ ಓದಿನಲ್ಲಿ ಮುಂದಿದ್ದ. ಹೀಗಿದ್ದರೂ ವ್ಯಾಸಂಗದಲ್ಲಿ ಹಿಂದೆ ಬಿದ್ದಿದ್ದರಿಂದ ಬೇಸರಗೊಂಡು ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಪ್ರಕರಣದಲ್ಲಿನ ಲೋಪವನ್ನು ಸರಿಪಡಿಸಬೇಕು. ನಿಷ್ಪಕ್ಷಪಾತ ತನಿಖೆ ಆಗಬೇಕು ಎಂಬುದೇ ನಮ್ಮ ಬೇಡಿಕೆ ಎಂದು ಮುಖ್ಯಮಂತ್ರಿಯನ್ನು ಕೋರಲಾಗಿದೆ’ ಎಂದು ರಾಧಿಕಾ ವೇಮುಲ ತಿಳಿಸಿದ್ದಾರೆ.

‘ಪೊಲೀಸರು ಸಲ್ಲಿಸಿದ ಅಂತಿಮ ತನಿಖಾ ವರದಿಗೆ ಎಬಿವಿಪಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಭ್ರಮಿಸಬಹುದು. ಆದರೆ ಇಷ್ಟು ಬೇಗ ಅವರ ಸಂಭ್ರಮ ಅಗತ್ಯವಿಲ್ಲ. ರೋಹಿತ್ ವೇಮುಲ ಸಾವಿಗೆ ನ್ಯಾಯ ದೊರಕಿಸುವವರೆಗೂ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನನ್ನ ಹೋರಾಟ ಮುಂದುವರಿಯಲಿದೆ’ ಎಂದಿದ್ದಾರೆ.

ಅಂತಿಮ ತನಿಖಾ ವರದಿ ಕುರಿತು ರೋಹಿತ್ ವೇಮುಲ ತಾಯಿ ವ್ಯಕ್ತಪಡಿಸಿರುವ ಸಂದೇಹವನ್ನೇ ಆಧಾರವಾಗಿಟ್ಟುಕೊಂಡು, ತನಿಖೆ ನಡೆಸುವುದಾಗಿ ತೆಲಂಗಾಣ ಡಿಜಿಪಿ ರವಿ ಗುಪ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.