ADVERTISEMENT

ವಿರೋಧ ಪಕ್ಷಗಳಿಂದ ಗದ್ದಲ: ದಿನದ ಮಟ್ಟಿಗೆ ರಾಜ್ಯಸಭೆ ಕಲಾಪ ಮುಂದೂಡಿಕೆ

ಐಎಎನ್ಎಸ್
Published 7 ಡಿಸೆಂಬರ್ 2021, 13:01 IST
Last Updated 7 ಡಿಸೆಂಬರ್ 2021, 13:01 IST
ವಿರೋಧ ಪಕ್ಷಗಳಿಂದ ಗದ್ದಲ: ದಿನದ ಮಟ್ಟಿಗೆ ರಾಜ್ಯಸಭೆ ಕಲಾಪ ಮುಂದೂಡಿಕೆ
ವಿರೋಧ ಪಕ್ಷಗಳಿಂದ ಗದ್ದಲ: ದಿನದ ಮಟ್ಟಿಗೆ ರಾಜ್ಯಸಭೆ ಕಲಾಪ ಮುಂದೂಡಿಕೆ   

ನವದೆಹಲಿ: 12 ಮಂದಿ ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪವನ್ನು ಬುಧವಾರದವರೆಗೆ ಮುಂದೂಡಲಾಯಿತು.

11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಗದ್ದಲದಿಂದಾಗಿ ಮೊದಲಿಗೆ ಮಧ್ಯಾಹ್ನ 2 ಗಂಟೆವರೆಗೆ ಸದನವನ್ನು ಮುಂದೂಡಲಾಯಿತು. ಮತ್ತೆ 3 ಗಂಟೆಗೆ ಮುಂದೂಡಲಾಯಿತು. ಬಳಿಕ ಬಾಡಿಗೆ ತಾಯ್ತನ ಮಸೂದೆಯ ವಿಚಾರವಾಗಿ ಚರ್ಚೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಪ್ರತಿಭಟನೆ ನಡೆಸಿದವು.

ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಾಪದಿಂದ 12 ಮಂದಿ ಸಂಸದರನ್ನು ಅಮಾನತು ಮಾಡಿರುವ ವಿಚಾರವನ್ನು ಪ್ರಸ್ತಾಪಿಸಿದರು. ಆರ್‌ಜೆಡಿ ಸಂಸದ ಮನೋಜ್ ಝಾ ಕೂಡ, ಅಮಾನತು ಆದೇಶವನ್ನು ಹಿಂಪಡೆಯುವಂತೆ ಕೋರಿದರು. ಈ ವೇಳೆ ಸಭಾಪತಿ ಇಬ್ಬರ ಮನವಿಯನ್ನು ತಿರಸ್ಕರಿಸಿದರು.

ADVERTISEMENT

ಇದೇ ವಿಚಾರವಾಗಿ ಪರಿಸರ ಖಾತೆ ಸಚಿವ ಭೂಪೇಂದರ್ ಯಾದವ್ ಮಾತನಾಡಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಧ್ಯೆ ಪ್ರವೇಶಿಸಿ ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ಉಪ ಸಭಾಪತಿ ಸದನವನ್ನು ಒಂದು ದಿನಕ್ಕೆ ಮುಂದೂಡಿದರು.

ಆಡಳಿತ ಪಕ್ಷದ ಸದಸ್ಯರು, ಅಮಾನತುಗೊಂಡಿರುವ ಸದಸ್ಯರು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರೆ, ವಿರೋಧ ಪಕ್ಷದ ಸದಸ್ಯರು ಕ್ಷಮೆ ಕೇಳುವ ಅಗತ್ಯವಿಲ್ಲ, ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಅಮಾನತುಗೊಂಡವರಲ್ಲಿ ಕಾಂಗ್ರೆಸ್‌ನ ಆರು, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ ಇಬ್ಬರು, ಸಿಪಿಐ ಮತ್ತು ಸಿಪಿಎಂನ ತಲಾ ಒಬ್ಬರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.