ADVERTISEMENT

ಅನುದಾನ ಒದಗಿಸಲು ಕೇಂದ್ರಕ್ಕೆ ಮನವಿ

ಕಿದ್ವಾಯಿ ಆಸ್ಪತ್ರೆಯಲ್ಲಿ ಪ್ರೋಟಾನ್‌ ಥೆರೆಪಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 22:22 IST
Last Updated 16 ಮಾರ್ಚ್ 2022, 22:22 IST

ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಪ್ರೋಟಾನ್ ಥೆರಪಿ ಸೌಲಭ್ಯ ಒದಗಿಸಲು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಗೆ ವಿಶೇಷ ಅನುದಾನ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯ ಡಾ.ಎಲ್.ಹನುಮಂತಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಬುಧವಾರ ಈ ವಿಷಯ ಪ್ರಸ್ತಾಪಿಸಿದ ಅವರು, ಸಂಸ್ಥೆಯಲ್ಲಿ ವಾರ್ಷಿಕ ಅಂದಾಜು 4.5 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ರೋಗಿಗಳ ಪೈಕಿ ಶೇ 20ರಷ್ಟು ರೋಗಿಗಳು ಹೊರ ರಾಜ್ಯದವರಾಗಿದ್ದಾರೆ. ಚಿಕಿತ್ಸೆಗೆ ದಾಖಲಾಗುವವರಲ್ಲಿ ಬಡವರೇ ಅಧಿಕ ಸಂಖ್ಯೆಯಲ್ಲಿದ್ದು, ದೂರದ ಊರುಗಳಿಂದ ಬರುತ್ತಾರೆ ಎಂದು ಅವರು ಹೇಳಿದರು.

ಬಡ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯನ್ನು ಮೇಲ್ದರ್ಜೆಗೆ ಏರಿಸಬೇಕಾಗಿದ್ದು, ಪ್ರೋಟಾನ್ ಥೆರಪಿ ಸೌಲಭ್ಯವನ್ನು ಒದಗಿಸಲು ಹಣಕಾಸಿನ ನೆರವು ಘೋಷಿಸಬೇಕಿದೆ ಎಂದು ಅವರು ಕೋರಿದರು.

ADVERTISEMENT

ಈ ಆಸ್ಪತ್ರೆಯ ಶೇ 70ರಷ್ಟು ರೋಗಿಗಳಿಗೆ ರೇಡಿಯೊ ಥೆರೆಪಿಯನ್ನು ಹೈ ಎನರ್ಜಿ ಪ್ರೋಟಾನ್‌ ಮತ್ತು ಎಕ್ಸ್‌–ರೇ ಬಳಸುವ ಮೂಲಕ ನೀಡಲಾಗುತ್ತಿದೆ. ಪೂರ್ಣ ಪ್ರಮಾಣದ ಪ್ರೋಟಾನ್‌ ಥೆರೆಪಿ ಸೌಲಭ್ಯವನ್ನು ಒದಗಿಸಲು ₹ 550 ಕೋಟಿ ಅನುದಾನದ ಅಗತ್ಯವಿದೆ ಎಂದು ಅವರು ವಿವರಿಸಿದರು.

ಈ ಸಂಸ್ಥೆಯ ಕಲ್ಬುರ್ಗಿ ಮತ್ತು ತುಮಕೂರಿನ ಪ್ರಾದೇಶಿಕ ಘಟಕಗಳಿಗೆ ವಾರ್ಷಿಕ ₹ 45 ಕೋಟಿ ಒದಗಿಸಲಾಗುತ್ತಿದೆ ಎಂದ ಅವರು, ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಸೌಲಭ್ಯವನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ವಿಶೇಷ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.

ಕ್ಯಾನ್ಸರ್‌ ಚಿಕಿತ್ಸೆ ಅತ್ಯಂತ ದುಬಾರಿ ಆಗಿರುವುದರಿಂದ ಈ ಸಂಸ್ಥೆಗೆ ಕೇಂದ್ರ ಸರ್ಕಾರವು ಅಗತ್ಯ ಅನುದಾನ ಒದಗಿಸಲು ಮುಂದಾಗಬೇಕು ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

‘ರಾಜ್ಯಸಭೆಯ ಎಲ್ಲ ಸದಸ್ಯರು ಬೆಂಗಳೂರಿನ ಈ ಸಂಸ್ಥೆಗೆ ಮುಕ್ತವಾಗಿ ಆರ್ಥಿಕ ನೆರವು ನೀಡಬಹುದು. ನಾನೂ ಈ ಸಂಸ್ಥೆಗೆ ಆರ್ಥಿಕ ನೆರವು ನೀಡಿದ್ದೇನೆ. ಅನುದಾನ ಒದಗಿಸುವ ಕುರಿತು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗುವುದು’ ಎಂದು ಸಭಾಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.