ಬಿ.ಆರ್. ಗವಾಯಿ
(ಪಿಟಿಐ ಚಿತ್ರ)
ಅಮರಾವತಿ (ಮಹಾರಾಷ್ಟ್ರ): ಅಮರಾವತಿಯಲ್ಲಿ ಅಕ್ಟೋಬರ್ 5ರಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ( ಆರ್‌ಎಸ್‌ಎಸ್ ) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರ ತಾಯಿ ಕಮಲಾತೈ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಕಮಲಾತೈ ಅವರನ್ನು ಆರ್‌ಎಸ್‌ಎಸ್ ಆಹ್ವಾನಿಸಿತ್ತು. ಆದರೆ ಸುದ್ದಿ ಸೃಷ್ಟಿಸಿದ ವಿವಾದ ಮತ್ತು ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾಗಿ ಅವರು ಬಹಿರಂಗ ಪತ್ರದ ಮೂಲಕ ತಿಳಿಸಿದ್ದಾರೆ.
ಅಕ್ಟೋಬರ್ 5ರ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಅನೇಕರು ನನ್ನನ್ನು ಟೀಕಿಸುವುದಲ್ಲದೇ, ನನ್ನ ಪತಿ, ದಾದಾಸಾಹೇಬ್ ಗವಾಯಿ ಎಂದೇ ಜನಪ್ರಿಯರಾಗಿರುವ ಆರ್.ಎಸ್. ಗವಾಯಿ (ಬಿಹಾರದ ಮಾಜಿ ರಾಜ್ಯಪಾಲ) ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಲು ಆರಂಭಿಸಿದರು.
ನಾವು ಅಂಬೇಡ್ಕರ್ ಅವರ ಸಿದ್ಧಾಂತದ ಪ್ರಕಾರ ಜೀವನ ನಡೆಸಿದ್ದೇವೆ. ದಾದಾಸಾಹೇಬ್ ಗವಾಯಿ ಅವರು ಅಂಬೇಡ್ಕರ್ ಚಳವಳಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ವಿಭಿನ್ನ ಸಿದ್ಧಾಂತಗಳ ವೇದಿಕೆಯಲ್ಲಿ ನಮ್ಮ ಸಿದ್ಧಾಂತವನ್ನು ಹಂಚಿಕೊಳ್ಳುವುದು ಸಹ ಮುಖ್ಯವಾಗಿದೆ. ಅದಕ್ಕೆ ಧೈರ್ಯ ಬೇಕು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ಹರಡಲು ವಿವಿಧ ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಅವರು (ಆರ್.ಎಸ್. ಗವಾಯಿ) ಭಾಗವಹಿಸುತ್ತಿದ್ದರು. ಅಲ್ಲಿ ವಂಚಿತ ವರ್ಗಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದರು. ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿಯೂ ಅವರು ಭಾಗವಹಿಸಿದ್ದರು. ಆದರೆ ಎಂದಿಗೂ ಹಿಂದುತ್ವವನ್ನು ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ.
ನಾನು ಅಕ್ಟೋಬರ್ 5ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ, ಅಂಬೇಡ್ಕರ್ ಅವರ ವಿಚಾರಗಳನ್ನು ಮಂಡಿಸುತ್ತಿದ್ದೆ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ದಿ.ಪತಿಯ ವಿರುದ್ಧ ಆರೋಪಗಳ ಸುರಿಮಳೆ ಬಂದಾಗ ಹಾಗೂ ಒಂದು ಕಾರ್ಯಕ್ರಮದ ಕಾರಣದಿಂದಾಗಿ ಅವರ ವಿರುದ್ಧ ಅಪಪ್ರಚಾರ ಮಾಡಲು ಯತ್ನಗಳು ನಡೆದಾಗ ಬೇಸರದಿಂದ ಕಾರ್ಯಕ್ರಮಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದಾರೆ.
1925ರಲ್ಲಿ ವಿಜಯದಶಮಿಯಂದು ಸ್ಥಾಪನೆಯಾದ ಆರ್‌ಎಸ್‌ಎಸ್, ತನ್ನ ಶತಮಾನೋತ್ಸವ ವರ್ಷವನ್ನು ಗುರುತಿಸಲು ದೇಶದಾದ್ಯಂತ ಒಂದು ಲಕ್ಷ ಹಿಂದೂ ಸಮ್ಮೇಳನಗಳು ಹಾಗೂ ಸಾವಿರಾರು ಚರ್ಚೆ, ಸಭೆಗಳು ಸೇರಿದಂತೆ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.