
ದತ್ತಾತ್ರೇಯ ಹೊಸಬಾಳೆ
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರನ್ನು ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗವೊಂದು ದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿದೆ.
ಹೊಸಬಾಳೆ ಅವರೊಂದಿಗೆ ನಿಯೋಗ ಒಂದು ಗಂಟೆ ಚರ್ಚೆ ನಡೆಸಿದ್ದು, ಚೀನಾದ ಮನವಿ ಮೇರೆಗೆ ಈ ಸಭೆಯನ್ನು ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.
ಚೀನಾ ಕಮ್ಯುನಿಸ್ಟ್ ಪಕ್ಷದ ಅಂತರರಾಷ್ಟ್ರೀಯ ವಿಭಾಗದ ಉಪ ಸಚಿವ ಸನ್ ಹಯಾನ್ ನೇತೃತ್ವದ ನಿಯೋಗ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಸೋಮವಾರ ಭೇಟಿ ನೀಡಿತ್ತು. ನಿಯೋಗದೊಂದಿಗೆ ಭಾರತದಲ್ಲಿರುವ ಚೀನಾದ ರಾಯಭಾರಿ ಶು ಫೀಹಾಂಗ್ ಅವರು ಇದ್ದರು.
ಈ ಸಭೆಯಲ್ಲಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದ ಬಿಜೆಪಿ ನಿಯೋಗವು, ಬಿಜೆಪಿ ಮತ್ತು ಸಿಪಿಸಿ ನಡುವಿನ ಸಂವಹನ ವೃದ್ಧಿಗೊಳಿಸುವ ಕುರಿತು ಚರ್ಚಿಸಿತು.
ಭಾರತದ ಬಹುತೇಕ ಭೂಪ್ರದೇಶ ಆಕ್ರಮಿಸಿ ಆಪರೇಷನ್ ಸಿಂಧೂರದ ವೇಳೆ ಪಾಕಿಸ್ತಾನವನ್ನು ಮುಕ್ತವಾಗಿ ಬೆಂಬಲಿಸಿದ ಚೀನಾದ ಕಮ್ಯುನಿಸ್ಟ್ ಪಕ್ಷವನ್ನು ಬಿಜೆಪಿ ತನ್ನ ಕೇಂದ್ರ ಕಚೇರಿಗೆ ಸ್ವಾಗತಿಸಿದೆಸಾಗಾರಿಕಾ ಘೋಷ್ ತೃಣಮೂಲ ಕಾಂಗ್ರೆಸ್ ನಾಯಕಿ
ಇದು ಮುಕ್ತ ಸಭೆ:
ಬಿಜೆಪಿ ಭಾರತ ಮತ್ತು ಚೀನಾ ನಡುವಿನ ಸಂಬಂಧ ವೃದ್ಧಿಸಲು ಚೀನಾ ನಿಯೋಗದೊಂದಿಗೆ ಮುಕ್ತವಾಗಿಯೇ ಔಪಚಾರಿಕ ಸಭೆ ನಡೆಸಲಾಗಿದೆ ಎಂದು ಬಿಜೆಪಿ ಮಂಗಳವಾರ ತಿಳಿಸಿದೆ. ‘ಚೀನಾ ಜತೆಗಿನ ವ್ಯವಹಾರಗಳಲ್ಲಿ ಬಿಜೆಪಿ ಬೂಟಾಟಿಕೆ ಪ್ರದರ್ಶಿಸುತ್ತಿದೆ. ಚೀನಾದೊಂದಿಗಿನ ವ್ಯವಹಾರ ನೀತಿಗಳಲ್ಲಿ ಸರ್ಕಾರವು ಮುಕ್ತ ಮತ್ತು ಪಾರದರ್ಶಕವಾಗಿರಬೇಕು’ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಸಾರ್ವಜನಿಕ ಇಲಾಖೆಯ ಮುಖ್ಯಸ್ಥ ಪವನ್ ಖೇರಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ತುಹೀನ್ ಸಿನ್ಹಾ ‘ಚೀನಾದೊಂದಿಗೆ ಔಪಚಾರಿಕವಾಗಿ ಬಹಳ ಮುಕ್ತವಾಗಿ ಸಭೆ ನಡೆಸಿದ್ದೇವೆ. ವರ್ಷಗಳ ಕಾಲ ಬಹಿರಂಗಪಡಿಸಲು ಸಾಧ್ಯವಾಗದಂತಹ ರಹಸ್ಯ ಒಪ್ಪಂದವನ್ನೇನೂ ನಾವು ಮಾಡಿಕೊಂಡಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.