ADVERTISEMENT

ಬಂಗಾಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ, ಗರ್ಭಿಣಿ ಪತ್ನಿ ಮತ್ತು ಮಗನ ಹತ್ಯೆ 

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 10:09 IST
Last Updated 10 ಅಕ್ಟೋಬರ್ 2019, 10:09 IST
ಹತ್ಯೆಗೀಡಾದ ಪ್ರಕಾಶ್ ಪಾಲ್ ಕುಟುಂಬ (ಕೃಪೆ: ಟ್ವಿಟರ್)
ಹತ್ಯೆಗೀಡಾದ ಪ್ರಕಾಶ್ ಪಾಲ್ ಕುಟುಂಬ (ಕೃಪೆ: ಟ್ವಿಟರ್)   

ಮುರ್ಷಿದಾಬಾದ್: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಕಾರ್ಯಕರ್ತ, ಆತನ ಗರ್ಭಿಣಿ ಪತ್ನಿ ಮತ್ತು 6 ವರ್ಷದ ಮಗನ ಮೃತದೇಹ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದೆ.

ದುಷ್ಕರ್ಮಿಗಳು ಪ್ರಕಾಶ್ ಪಾಲ್ (35), ಬ್ಯೂಟಿ ಪಾಲ್ (28) ಮತ್ತು ಮಗ ಅಂಗನ್ ಪಾಲ್ (6) ಅವರನ್ನು ಹತ್ಯೆ ಮಾಡಿದ್ದಾರೆ . ಮೂವರ ಮೃತದೇಹದಲ್ಲಿಯೂ ಗಾಯದ ಕಲೆ ಇದ್ದು,ಅಂಗನ್ ಪಾಲ್‌ನ್ನು ಬಟ್ಟೆಯಿಂದ ಉಸಿರುಗಟ್ಟಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.ಹತ್ಯೆಗೀಡಾದ ಬ್ಯೂಟಿ ಪಾಲ್ 8 ತಿಂಗಳ ಗರ್ಭಿಣಿಯಾಗಿದ್ದರು.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರಕಾಶ್ ಪಾಲ್ ಸ್ಥಳೀಯ ಮಾರುಕಟ್ಟೆಯಿಂದ ವಾಪಸ್ ಬರುತ್ತಿರುವುದನ್ನು ಜನರು ನೋಡಿದ್ದಾರೆ. ಇದಾದ ನಂತರ ಒಂದು ಗಂಟೆಯಲ್ಲಿ ಈ ಕುಟುಂಬ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ADVERTISEMENT

ಪಾಲ್ ಅವರು ಆರ್‌ಎಸ್‍ಎಸ್ ಸದಸ್ಯರಾಗಿದ್ದು. ಹತ್ಯೆಗೆ ರಾಜಕೀಯ ಸಂಬಂಧವಿಲ್ಲ ಎಂದು ಮುರ್ಷಿದಾಬಾದ್ (ದಕ್ಷಿಣ) ಬಿಜೆಪಿ ಉಪಾಧ್ಯಕ್ಷ ಹುಮಾಯೂನ್ ಕಬೀರ್ ಹೇಳಿದ್ದಾರೆ.

ಕನೈಗಂಜ್-ಲೆಬುತಲದಲ್ಲಿರುವ ಮನೆಯ ಒಳಗಿನ ಕೋಣೆಯಲ್ಲಿ ಪಾಲ್ ಮತ್ತು ಮಗನ ಮೃತದೇಹ ಪತ್ತೆಯಾಗಿತ್ತು. ಇನ್ನೊಂದು ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬ್ಯೂಟಿ ಪಾಲ್ ಅವರ ಮೃತದೇಹ ಪತ್ತೆಯಾಗಿತ್ತು. ಪಾಲ್ ಅವರು ಪ್ರೈಮರಿ ಶಾಲೆಯೊಂದರಲ್ಲಿ ಅಧ್ಯಾಪಕರಾಗಿದ್ದರು.

ಪ್ರಕಾಶ್ ಪಾಲ್ ಅವರ ಕುಟುಂಬದವರು ಬೆಳಗ್ಗೆ 11.15ಕ್ಕೆ ಪಾಲ್ ಮತ್ತು ಮಗನ ಜತೆ ಫೋನ್‌ನಲ್ಲಿ ಮಾತನಾಡಿದ್ದರು. ಕೆಲವೇ ಸೆಕೆಂಡ್‌ನಲ್ಲಿ ಫೋನ್ ಸಂಪರ್ಕ ಕಡಿದುಕೊಂಡಿತ್ತು. ಪ್ರಕಾಶ್ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಕೊಲೆಗಾರರು ಮನೆಯಲ್ಲೇ ಇದ್ದರು ಅನಿಸುತ್ತದೆ ಎಂದುಪಾಲ್ ಅವರ ಮಾವ ರಾಜೇಶ್ ಘೋಷ್ ಹೇಳಿದ್ದಾರೆ. ಪೊಲೀಸರು ಹತ್ಯಾ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.