ತಿರುವನಂತಪುರ: ಕೇರಳದ ಗುರುವಾಯೂರಿನ ಆನೆ ಶಿಬಿರದಲ್ಲಿರುವ 60 ವರ್ಷದ ಹಿರಿಯ ಆನೆ ನಂದಿನಿ ಮೂರ್ನಾಲ್ಕು ದಿನದಿಂದಲೂ ಒಳ್ಳೆಯ ನಿದ್ದೆ ಮಾಡುತ್ತಿದೆ. ಇದಕ್ಕೆ ಕಾರಣ ರಬ್ಬರ್ ನೆಲಹಾಸು.
ನಂದಿನಿ ಸೇರಿದಂತೆ ಶಿಬಿರದಲ್ಲಿರುವ ಕೆಲವು ಆನೆಗಳು ನಿರಂತರವಾಗಿ ಒದ್ದೆಯ ಮೇಲ್ಮೈ ಹೊಂದಿದ್ದರಿಂದ, ಕಾಲಿನ ಬಾಧೆಯಿಂದ ಬಳಲುತ್ತಿದ್ದವು. ಸರಿಯಾಗಿ ನಿದ್ರೆ ಮಾಡಲಾಗದೆ ನರಳುತ್ತಿದ್ದವು. ಇದಕ್ಕೆ ಪರಿಹಾರವಾಗಿ ಗುರುವಾರದಿಂದ ರಬ್ಬರ್ ಹಾಸಿಗೆಯನ್ನು ನೆಲಹಾಸಾಗಿ ಬಳಸಲಾಗುತ್ತಿದೆ.
‘ಮೂರ್ನಾಲ್ಕು ದಿನದಿಂದಲೂ ಆನೆಗಳು ಸುಖಕರವಾಗಿ ನಿದ್ರೆ ಮಾಡುತ್ತಿವೆ. ಒದ್ದೆ ಮೇಲ್ಮೈನಿಂದ ಎದುರಿಸುತ್ತಿದ್ದ ಸಮಸ್ಯೆಗಳು ಇದೀಗ ಗೋಚರಿಸುತ್ತಿಲ್ಲ’ ಎಂದು ಆನೆ ಶಿಬಿರದ ಉಪ ಆಡಳಿತಾಧಿಕಾರಿ ಮಾಯಾದೇವಿ ಕೆ.ಎಸ್. ತಿಳಿಸಿದರು.
‘ಆನೆಗಳಿಗೆ ರಬ್ಬರ್ ನೆಲಹಾಸು ಬಳಸುತ್ತಿರೋದು ಇಲ್ಲಿಯೇ. ಇದೇ ಮೊದಲು’ ಎಂದು ಅವರು ಹೇಳಿದರು.
‘ಆನೆಗಳು ಎದುರಿಸುತ್ತಿದ್ದ ಸಮಸ್ಯೆಯ ಪರಿಹಾರಕ್ಕಾಗಿ ಹಲವು ಅನ್ವೇಷಣೆಯ ಬಳಿಕ ರಬ್ಬರ್ ನೆಲಹಾಸು ಬಳಸಲಾಗಿದೆ. ಆರಾಮದಾಯಕ ಮತ್ತು ಆರೋಗ್ಯಕರ ನೆಲ ಒದಗಿಸಲಿಕ್ಕಾಗಿ ರಬ್ಬರ್ ನೆಲಹಾಸನ್ನು ಇಳಿಜಾರಾದ ಸಿಮೆಂಟ್ ನೆಲಕ್ಕೆ ಅಳವಡಿಸಲಾಗಿದೆ. ಆನೆಗಳು ಇದಕ್ಕೆ ಹಾನಿ ಮಾಡಲಾಗಿಲ್ಲ. ಇಳಿಜಾರು ಇರೋದರಿಂದ ಲದ್ದಿ, ಮೂತ್ರವು ತಗ್ಗಿಗೆ ಹರಿಯಲಿದೆ. ಇದರಿಂದ ಆನೆಗಳ ಮೇಲ್ಮೈ ಒದ್ದೆಯಾಗುವುದು ತಪ್ಪಿದೆ’ ಎಂದರು.
ತ್ರಿಶ್ಶೂರ್ ಜಿಲ್ಲೆಯ ಗುರುವಾಯೂರಿನ ಪ್ರಸಿದ್ಧ ಶ್ರೀಕೃಷ್ಣ ದೇಗುಲದ ಬಳಿಯೇ ಈ ಆನೆ ಶಿಬಿರವಿದೆ. ಇಲ್ಲಿ 40 ಆನೆಗಳಿದ್ದು, ಶಿಬಿರದ ಆಡಳಿತ ವರ್ಗ ಇನ್ನಷ್ಟು ಆನೆಗಳಿಗೆ ರಬ್ಬರಿನ ನೆಲಹಾಸು ಬಳಸಲು ಯೋಚಿಸಿದೆ.
ರಬ್ಬರ್ ನೆಲಹಾಸು ಅಳವಡಿಸಲು ₹ 8 ಲಕ್ಷ ವೆಚ್ಚವಾಗಿದ್ದು, ಕೊಯಮತ್ತೂರಿನ ಭಕ್ತ ಮಾಣಿಕಂ ದೇಣಿಗೆ ನೀಡಿದ್ದಾರೆ. ಗುರುವಾಯೂರು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಿ.ಕೆ.ವಿಜಯನ್ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.