ADVERTISEMENT

ನ್ಯಾಯಮೂರ್ತಿಗಳೂ ಆಸ್ತಿ ವಿವರ ಘೋಷಣೆ ಮಾಡುವುದನ್ನು ಕಡ್ಡಾಯ ಮಾಡಲು ನಿಯಮ: ಕೇಂದ್ರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 14:20 IST
Last Updated 12 ಫೆಬ್ರುವರಿ 2024, 14:20 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

(ಚಿತ್ರ ಕೃಪೆ–ಪಿಟಿಐ)

ನವದೆಹಲಿ: ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳು ಆಸ್ತಿ ವಿವರ ಘೋಷಣೆ ಮಾಡುವುದನ್ನು ಕಡ್ಡಾಯಗೊಳಿಸಲು ನಿಯಮ ರೂಪಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ADVERTISEMENT

ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ, ನ್ಯಾಯಾಂಗ ಇಲಾಖೆಯ ಜೊತೆಗೆ ಈ ಕುರಿತು ಚರ್ಚಿಸಲಾಗಿದ್ದು, ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ ಎಂದು ಸರ್ಕಾರವು ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿಯನ್ನು ನೀಡಿದೆ.

ಸರ್ಕಾರದ ಈ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಕಾನೂನು ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿಯು, ಈ ಕುರಿತು ರಿಜಿಸ್ಟ್ರಿ ಅವರೊಂದಿಗೆ ಸಂವಾದ ಪ್ರಕ್ರಿಯೆ ಚುರುಕುಗೊಳಿಸುವಂತೆ ನ್ಯಾಯಾಂಗ ಇಲಾಖೆಗೆ ಸೂಚಿಸಿದೆ. 

ಈ ಮೊದಲು ಮಂಡಿಸಲಾಗಿದ್ದ ‘ನ್ಯಾಯಾಂಗ ಪ್ರಕ್ರಿಯೆ ಮತ್ತು ಅದರ ಸುಧಾರಣೆ’ ವರದಿ ಕುರಿತಂತೆ ಕೈಗೊಂಡಿರುವ ಕ್ರಮಗಳಿಗೆ ಸಂಬಂಧಿಸಿದ ವರದಿಯನ್ನು ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಲಾಗಿದೆ.

ಈ ಮೊದಲು ಸಲ್ಲಿಸಲಾಗಿದ್ದ ವರದಿಯಲ್ಲಿ ಬಿಜೆಪಿ ಸಂಸದ ಸುಶೀಲ್‌ ಕುಮಾರ್ ಮೋದಿ ನೇತೃತ್ವದ ಸಮಿತಿಯು, ಸಾಮಾನ್ಯ ನಿಯಮದಂತೆ ಸಾಂವಿಧಾನಿಕ ಸಂಸ್ಥೆಗಳು ಮತ್ತು ಸರ್ಕಾರಿ ನೌಕರರು ಕಡ್ಡಾಯವಾಗಿ ವಾರ್ಷಿಕವಾಗಿ ತಮ್ಮ ಆದಾಯ ಮತ್ತು ಹೊಣೆಗಾರಿಕೆಯ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ ಎಂದು ಹೇಳಿತ್ತು.

‘ಸುಪ್ರಿಂ ಕೋರ್ಟ್‌ ಈ ಹಿಂದೆ, ಲೋಕಸಭೆ, ವಿಧಾನಸಭೆಗಳಿಗೆ ಸ್ಪರ್ಧಿಸುವವರ ಆಸ್ತಿ ವಿವರ ತಿಳಿಯುವುದು ಜನರ ಹಕ್ಕು ಎಂದು ಪ್ರತಿಪಾದಿಸಿತ್ತು. ಈ ತರ್ಕದ  ಪ್ರಕಾರ ನ್ಯಾಯಮೂರ್ತಿಗಳು ಹೀಗೆ ವಿವರ ಪ್ರಕಟಿಸುವ ಅಗತ್ಯವಿಲ್ಲ ಎಂದಾಗುತ್ತದೆ. ಆದರೆ, ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿರುವ, ಸರ್ಕಾರದ ಬೊಕ್ಕಸದಿಂದ ವೇತನ ಪಡೆಯುತ್ತಿರುವ ಯಾರೇ ಆದರೂ ಆಸ್ತಿ ವಿವರ ಘೋಷಿಸುವುದು ಕಡ್ಡಾಯ’ ಎಂದು ಸಮಿತಿಯು ಪ್ರತಿಪಾದಿಸಿತ್ತು.

ಸುಪ್ರಿಂ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳು ಆಸ್ತಿ ವಿವರ ಪ್ರಕಟಿಸುವುದರಿಂದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸ ಹೆಚ್ಚಲಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.