ADVERTISEMENT

ರಷ್ಯಾದಿಂದ ಇಂಧನ ಖರೀದಿಸುವ ಭಾರತದ ನಿರ್ಧಾರವನ್ನು ಗೌರವಿಸುತ್ತೇವೆ: ಬ್ರಿಟನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2022, 4:36 IST
Last Updated 1 ಏಪ್ರಿಲ್ 2022, 4:36 IST
ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಎಲಿಜಬೆತ್ ಟ್ರುಸ್
ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಎಲಿಜಬೆತ್ ಟ್ರುಸ್   

ನವದೆಹಲಿ: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ಭಾರತಕ್ಕೆ ಹೇಳುವುದಿಲ್ಲ ಎಂದು ಬ್ರಿಟನ್‌ವಿದೇಶಾಂಗ ಕಾರ್ಯದರ್ಶಿ ಎಲಿಜಬೆತ್ ಟ್ರುಸ್ ಹೇಳಿದ್ದಾರೆ.

ಟ್ರುಸ್‌ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ನವದೆಹಲಿಯಲ್ಲಿ ಗುರುವಾರ ಮಾತುಕತೆ ನಡೆಸಿದರು. ಬಳಿಕ ಮಾತನಾಡಿರುವ ಅವರು,'ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಅನುಗುಣವಾಗಿಬೇರೆ ದೇಶಗಳು ಕೈಗೊಳ್ಳುವ ನಿರ್ಧಾರಗಳನ್ನು ಗೌರವಿಸುವುದು ತುಂಬಾ ಮುಖ್ಯವೆಂದು ಭಾವಿಸುತ್ತೇನೆ.ಭಾರತ ಸಾರ್ವಭೌಮ ರಾಷ್ಟ್ರ.ಭಾರತ ಏನು ಮಾಡಬೇಕು ಎಂಬುದನ್ನು ನಾವು ಹೇಳಲಾಗದು' ಎಂದಿದ್ದಾರೆ.

ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣದ ಕುರಿತು ಮಾತನಾಡಿರುವಟ್ರುಸ್‌,ಉಕ್ರೇನ್‌ನಿಂದ ಕ್ರಿಮಿಯಾವನ್ನು ರಷ್ಯಾ 2014ರಲ್ಲಿ ಸ್ವಾದೀನಪಡಿಸಿಕೊಂಡಿತು. ಅದಾದ ನಂತರವೂ, ರಷ್ಯಾದಿಂದ ಇಂಧನ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಯುರೋಪ್ ಸಾಕಷ್ಟು ಪ್ರಯತ್ನ ಮಾಡಿಲ್ಲ.ಅದರ ಫಲಿತಾಂಶವನ್ನು ನಾವೀಗ ನೋಡುತ್ತಿದ್ದೇವೆಎಂದು ಒತ್ತಿ ಹೇಳಿದ್ದಾರೆ.

ADVERTISEMENT

ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ದೇಶಗಳು ತೈಲ ಆಮದಿನ ಮೇಲೆ ನಿರ್ಬಂಧ ಹೇರಿದ್ದರಿಂದ ರಷ್ಯಾವು ಭಾರತಕ್ಕೆ ಅಧಿಕ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ನೀಡುವ ಆಫರ್ ನೀಡಿತ್ತು. ಹಾಗಾಗಿ, ಫೆಬ್ರುವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭವಾದ ಬಳಿಕ ಭಾರತವು ರಷ್ಯಾದಿಂದ 13 ಮಿಲಿಯನ್ ಬ್ಯಾರಲ್ ಕಚ್ಚಾತೈಲವನ್ನು ಆಮದು ಮಾಡಿಕೊಂಡಿದೆ. ಕಳೆದ ವರ್ಷಪೂರ್ತಿ ಭಾರತವು 16 ಮಿಲಿಯನ್ ಬ್ಯಾರಲ್ ಕಚ್ಚಾತೈಲವನ್ನು ಆಮದು ಮಾಡಿಕೊಂಡಿತ್ತು.

ರಷ್ಯಾದಿಂದ ತೈಲ ಖರೀದಿಸುವ ಭಾರತದ ನಿರ್ಧಾರವನ್ನು ಅಮೆರಿಕ ಸೇರಿದಂತೆ ಹಲವು ಪಾಶ್ಚಾತ್ಯ ರಾಷ್ಟ್ರಗಳು ಟೀಕಿಸಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್‌,'ದೇಶಗಳು ಮಾರುಕಟ್ಟೆಗೆ ತೆರೆದುಕೊಳ್ಳುವುದು ಸ್ವಾಭಾವಿಕಪ್ರಕ್ರಿಯೆ. ತನ್ನ ಜನರಿಗೆ ಯಾವುದು ಉತ್ತಮ ಎನಿಸುತ್ತದೋ ಅಂತಹ ವ್ಯವಹಾರಗಳನ್ನು ಹುಡುಕುವುದು ಸಹಜ' ಎಂದಿದ್ದಾರೆ.

ಮುಂದುವರಿದು, ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುವ ದೊಡ್ಡ ಖರೀದಿದಾರರು ಯಾರು ಎಂಬುದನ್ನು ಎರಡು ಅಥವಾ ಮೂರು ತಿಂಗಳ ನಂತರ ನೋಡಬೇಕು. ಆ ಪಟ್ಟಿಯು ಈ ಹಿಂದೆ (ಉಕ್ರೇನ್‌–ರಷ್ಯಾ ಸಮರಕ್ಕೂ ಮುನ್ನ) ಇದ್ದದ್ದಕ್ಕಿಂತ ಭಿನ್ನವಾಗಿರುವುದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ, ಉಕ್ರೇನ್‌–ರಷ್ಯಾ ಸಮರ ಅಂತ್ಯದ ಬಳಿಕ ಯುರೋಪಿನ ದೇಶಗಳು ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸಲಿವೆ ಎಂಬುದನ್ನು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.