ADVERTISEMENT

ರಷ್ಯಾ ಕ್ಷಿಪಣಿ ‘ಎಸ್‌–400’ ಖರೀದಿಸಿದರೆ ಕಠಿಣ ಕ್ರಮ: ಟ್ರಂಪ್‌ ಆಡಳಿತ ಎಚ್ಚರಿಕೆ

ಭಾರತಕ್ಕೂ ಟ್ರಂಪ್‌ ಆಡಳಿತದ ಎಚ್ಚರಿಕೆ

ಪಿಟಿಐ
Published 21 ಸೆಪ್ಟೆಂಬರ್ 2018, 16:30 IST
Last Updated 21 ಸೆಪ್ಟೆಂಬರ್ 2018, 16:30 IST
ಟ್ರಂಪ್
ಟ್ರಂಪ್   

ವಾಷಿಂಗ್ಟನ್‌: ರಷ್ಯಾದಿಂದ ‘ಎಸ್–400 ಟ್ರೈಂಫ್ ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆ’ ಖರೀದಿಸಲು ಭಾರತ ಮುಂದಾದರೆ ಅದನ್ನು ಗಮನಾರ್ಹ ವಹಿವಾಟು’ ಎಂದು ಪರಿಗಣಿಸಲಾಗುವುದು ಮತ್ತು ಭಾರತದ ಮೇಲೂ ಕಠಿಣ ನಿರ್ಬಂಧ ಹೇರಲು ಇದು ಆಹ್ವಾನ ನೀಡಿದಂತಾಗುತ್ತದೆ ಎಂದು ಟ್ರಂಪ್ ಆಡಳಿತ ಶುಕ್ರವಾರ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ರಷ್ಯಾ ನಿರ್ಮಿತ ಸುಕೊಯ್‌ –35 ಯುದ್ಧ ವಿಮಾನ ಮತ್ತು ಎಸ್‌–400 ವಾಯು ಕ್ಷಿಪಣಿ ಖರೀದಿಸಿದ ಚೀನಾದ ಮೇಲೆ ನಿರ್ಬಂಧ ಹೇರುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಮೆರಿಕದ ಪ್ರಸ್ತುತ ನೀತಿಯ ಪ್ರಕಾರ, ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಅಭಿವೃದ್ಧಿಶೀಲ ರಾಷ್ಟ್ರಗಳು ರಷ್ಯಾದ ಜತೆಗೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಂಡರೆ ಅಮೆರಿಕದ ನಿರ್ಬಂಧಗಳಿಗೆ ಗುರಿಯಾಗಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಭಾರತವು ರಷ್ಯಾದ ಅತ್ಯಾಧುನಿಕ ಕ್ಷಿಪಣಿ ಮತ್ತು ಯುದ್ಧ ವಿಮಾನಗಳನ್ನು ಖರೀದಿಸಿದರೆ ‘ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿ ಮೇಲೆ ನಿರ್ಬಂಧ’ ಹೇರುವ ಅಮೆರಿಕದ ಸಿಎಎಟಿಎಸ್‌ಎ ಕಾಯ್ದೆ ಉಲ್ಲಂಘಿಸಿದಂತಾಗುತ್ತದೆ.

ರಷ್ಯಾದಿಂದ ಕ್ಷಿಪಣಿ ಮತ್ತು ಯುದ್ಧ ವಿಮಾನಗಳನ್ನು ಖರೀದಿಸುವ ಟರ್ಕಿ ಇನ್ನಿತರ ರಾಷ್ಟ್ರಗಳ ಮೇಲೂ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಲಾಗುವುದೇ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಶಸ್ತ್ರಾಸ್ತ್ರ ಖರೀದಿ ನಿರ್ಬಂಧವನ್ನು ರಷ್ಯಾವನ್ನು ಅಂತಿಮ ಗುರಿಯಾಗಿಟ್ಟುಕೊಂಡು ಹೇರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.