
ಶಬರಿಮಲೆ
(ಪಿಟಿಐ ಚಿತ್ರ)
ಕೊಚ್ಚಿ: ಶಬರಿಮಲೆಯಲ್ಲಿ ಜನದಟ್ಟಣೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಅಧಿಕಾರಿಗಳನ್ನು ಕೇರಳ ಹೈಕೋರ್ಟ್ ಇಂದು (ಬುಧವಾರ) ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಅಧಿಕಾರಿಗಳ ನಡುವಣ ಸಮನ್ವಯದ ಕೊರತೆಯಿಂತಾಗಿ ಪರಿಸ್ಥಿತಿ ನಿಯಂತ್ರಣ ತಪ್ಪಿದೆ ಎಂದು ನ್ಯಾಯಾಲಯ ಹೇಳಿದೆ.
'ಮಂಡಲ–ಮಕರವಿಳಕ್ಕು' ಆರಂಭವಾಗಿರುವ ಬೆನ್ನಲ್ಲೇ ಶಬರಿಮಲೆಯಲ್ಲಿ ಭಕ್ತರ ಭಾರಿ ದಟ್ಟಣೆ ಕಂಡುಬಂದಿದೆ. ಮಂಗಳವಾರದಂದು ಅವ್ಯವಸ್ಥೆಯಿಂದಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸಪಡಬೇಕಾಯಿತು.
'ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ವಿಫಲವಾಗಿದ್ದು, ಹಿಂದೆ ನೀಡಿರುವ ಸೂಚನೆಗಳನ್ನು ಏಕೆ ಪಾಲಿಸಿಲ್ಲ' ಎಂದು ಹೈಕೋರ್ಟ್ ಕೇಳಿದೆ.
'ಅಗತ್ಯ ಕಾಮಗಾರಿ ವ್ಯವಸ್ಥೆಗಳು ಆರು ತಿಂಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು. ದೇವಾಲಯದ ಪ್ರವೇಶಕ್ಕೆ ಏಕಕಾಲದಲ್ಲಿ ಏಕೆ ಅವಕಾಶ ನೀಡಲಾಯಿತು' ಎಂದು ಪ್ರಶ್ನಿಸಿದೆ.
'ಭಕ್ತಾದಿಗಳನ್ನು ಪ್ರತ್ಯೇಕ ವಲಯಗಳಲ್ಲಿ ವಿಂಗಡಿಸುವುದರಿಂದ ಜನದಟ್ಟಣೆಯನ್ನು ಉತ್ತಮವಾಗಿ ನಿರ್ವಹಿಸಬಹುದಾಗಿದೆ' ಎಂದು ನ್ಯಾಯಾಲಯ ಸಲಹೆ ನೀಡಿದೆ.
ನವೆಂಬರ್ 17ರಂದು ದೇವಸ್ಥಾನ ಬಾಗಿಲು ತೆರೆದ 48 ಗಂಟೆಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದು, ಜನದಟ್ಟಣೆಯನ್ನು ನಿಯಂತ್ರಿಸಲು ಟಿಡಿಬಿ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸಪಡಬೇಕಾಯಿತು. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತ ಭಕ್ತರಿಗೆ ಕುಡಿಯಲು ನೀರು ಸಹ ಸಿಕ್ಕಿರಲಿಲ್ಲ. ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ತಾಲ್ಲೂಕಿನ 58 ವರ್ಷದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದರು.
ಶಬರಿಮಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.