ADVERTISEMENT

ಶಬರಿಮಲೆ: ಭಕ್ತರಿಗೆ ದರ್ಶನದ ಮಾರ್ಗ ಬದಲು

ಪಿಟಿಐ
Published 10 ಮಾರ್ಚ್ 2025, 15:39 IST
Last Updated 10 ಮಾರ್ಚ್ 2025, 15:39 IST
   

ತಿರುವನಂತಪುರ: ಶಬರಿಮಲೆ ಭಕ್ತರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿರುವ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಶಬರಿಮಲೆಯಲ್ಲಿ ‘ದರ್ಶನ’ದ ಮಾರ್ಗವನ್ನು ಬದಲಿಸಲು ನಿರ್ಧಾರ ತೆಗೆದುಕೊಂಡಿದೆ.

ಇದರಿಂದ ಭಕ್ತರಿಗೆ ಸನ್ನಿಧಾನಂ ಪವಿತ್ರ 18 ಮೆಟ್ಟಿಲುಗಳನ್ನು ಹತ್ತಿದ ಕೂಡಲೇ ನೇರವಾಗಿ ದರ್ಶನದ ಭಾಗ್ಯ ದೊರೆಯಲಿದೆ.

ಮಾರ್ಚ್‌ 15ರಿಂದ ಆರಂಭವಾಗುವ ಮಾಸಿಕ ಪೂಜೆಯ ಸಮಯದಲ್ಲಿ ಈ ಬದಲಾವಣೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ವಿಷು ಪೂಜಾ ಸಮಯದಲ್ಲೂ ಇದು ಮುಂದುವರಿಯುತ್ತದೆ ಎಂದು ಟಿಡಿಬಿ ಅಧ್ಯಕ್ಷ ಪಿ.ಎಸ್‌.ಪ್ರಶಾಂತ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಹೊಸ ವ್ಯವಸ್ಥೆಯು ಯಶಸ್ವಿಯಾದರೆ, ಮುಂದಿನ ಮಂಡಳ– ಮಕರವಿಳಕ್ಕು ಋತುವಿನಲ್ಲಿ ಇದನ್ನು ಶಾಶ್ವತಗೊಳಿಸಲಾಗುವುದು ಎಂದರು.

‘ಪವಿತ್ರ 18 ಮೆಟ್ಟಿಲುಗಳನ್ನು ಹತ್ತಿದ ಬಳಿಕವೂ ದರ್ಶನಕ್ಕೆ ದೀರ್ಘ ಸಮಯ ಕಾಯಬೇಕಾಗುತ್ತಿದೆ. ಆದರೆ, ದರ್ಶನಕ್ಕೆ ಸಿಗುತ್ತಿರುವುದು 5 ಸೆಕೆಂಡಿಗಿಂತ ಕಡಿಮೆ ಅವಧಿ. ಹೀಗಾಗಿ ಮಾರ್ಗವನ್ನು ಬದಲಾಯಿಸುವಂತೆ ಒತ್ತಾಯಿಸಿ ಸಹಸ್ರಾರು ಭಕ್ತರು ಪತ್ರ ಮೂಲಕ ಮನವಿಗಳನ್ನು ಮಾಡಿದ್ದಾರೆ’ ಎಂದು ಅವರು ವಿವರಿಸಿದರು.

‘ಪ್ರಸ್ತುತ, 18 ಮೆಟ್ಟಿಲು ಹತ್ತಿದ ಬಳಿಕ ಭಕ್ತರು ದೇವಾಲಯದ ಸುತ್ತಲಿನ ಬ್ರಿಡ್ಜ್‌ನಲ್ಲಿನ ಸರದಿ ಸಾಲುಗಳಲ್ಲಿ ಸಾಗಬೇಕು. ಇದರಿಂದ ದರ್ಶನಕ್ಕೆ ದೊರೆಯುವ ಅವಧಿ ತೀರಾ ಕಡಿಮೆ. ಹೀಗಾಗಿ ಶೇ 80ಕ್ಕೂ ಹೆಚ್ಚು ಭಕ್ತರಿಗೆ ದರ್ಶನದ ತೃಪ್ತಿದಾಯಕ ಅನುಭವ ಆಗುತ್ತಿಲ್ಲ’ ಎಂದು ಅವರು ಹೇಳಿದರು.

ದೇವಾಲಯದ ತಂತ್ರಿಯಿಂದ ಅನುಮತಿ ಪಡೆದು, ಇತರ ಭಾಗಿದಾರರ ಜತೆಗೆ ವಿಸ್ತೃತವಾಗಿ ಚರ್ಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಹೊಸ ವ್ಯವಸ್ಥೆಯಲ್ಲಿ ಪ್ರತಿ ಭಕ್ತರಿಗೂ ಸುಮಾರು 20ರಿಂದ 25 ಸೆಕೆಂಡ್‌ಗಳವರೆಗೆ ದರ್ಶನ ದೊರೆಯುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.