
ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ದ್ವಾರಪಾಲಕ ಮೂರ್ತಿಗಳ ವೈಜ್ಞಾನಿಕ ಪರೀಕ್ಷೆಯನ್ನು ಸೋಮವಾರ ಮಧ್ಯಾಹ್ನ 1 ಗಂಟೆ ನಂತರ ದೇವ ಅನುಜ್ಞೆ (ದೈವಿಕ ಅನುಮತಿ) ವಿಧಿವಿಧಾನಗಳ ಬಳಿಕ ನಡೆಸಲಿದೆ.
ಡಿವೈಎಸ್ಪಿ ಎಸ್. ಶಶಿಧರನ್ ನೇತೃತ್ವದ ತಂಡವು ಬೆಟ್ಟದ ದೇವಾಲಯಕ್ಕೆ ಭಾನುವಾರ ತಲುಪಿದೆ. ಪೊಲೀಸರಲ್ಲದೆ, ರಾಸಾಯನಿಕ ವಿಶ್ಲೇಷಕರು ಸೇರಿದಂತೆ ವಿಧಿವಿಜ್ಞಾನ ತಜ್ಞರು ಈ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈಜ್ಞಾನಿಕ ಪರೀಕ್ಷೆ ನಡೆಸಲು ಅನುಮತಿ ಕೋರಿ ಎಸ್‌ಐಟಿ ನ್ಯಾಯಾಲಯದ ಮೊರೆ ಹೋಗಿತ್ತು. ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚಗಳು ಮತ್ತು ಪಕ್ಕದ ಕಂಬ ಫಲಕಗಳನ್ನು ತೂಕ ಮಾಡಲು ಎಸ್‌ಐಟಿಗೆ ನ್ಯಾಯಾಲಯ ನಿರ್ದೇಶಿಸಿತ್ತು.
ಲೋಹಲೇಪನದ ಶುದ್ಧತೆ ಮತ್ತು ಗುಣಮಟ್ಟವನ್ನು ನಿರ್ಣಯಿಸಲು ಚಿನ್ನದ ಹೊದಿಕೆಯ ಮಾದರಿಯನ್ನು ತೆಗೆದುಕೊಳ್ಳಲು, ಫಲಕಗಳ ಮೇಲ್ಮೈ ವಿಸ್ತೀರ್ಣವನ್ನು ಅಳೆಯಲು, ದ್ವಾರಪಾಲಕ ಮೂರ್ತಿಗಳ ಕವಚಗಳು ಮತ್ತು ಬಾಗಿಲಿನ ಚೌಕಟ್ಟುಗಳಲ್ಲಿನ ತಾಮ್ರದ ಮಾದರಿಗಳನ್ನು ಸಂಗ್ರಹಿಸಲು ತನಿಖಾಧಿಕಾರಿಗಳಿಗೆ ಸೂಚಿಸಿತ್ತು. ಈ ಮಾದರಿಗಳನ್ನು ವಿದ್ಯುತ್ ವಾಹಕತ್ವ, ಸೂಕ್ಷ್ಮ ರಚನೆ ಪರೀಕ್ಷೆಗಳು ಸೇರಿದಂತೆ ವೈಜ್ಞಾನಿಕ ವಿಶ್ಲೇಷಣೆಗಳಿಗೆ ಒಳಪಡಿಸಬೇಕು ಎಂದು ನ್ಯಾಯಾಲಯ ಹೇಳಿತ್ತು.
ಶಬರಿಮಲೆ ತೀರ್ಥಯಾತ್ರೆ ಆರಂಭವಾಗುವ ಮುನ್ನ ನ.15ರೊಳಗೆ ಎಸ್‌ಐಟಿ ಪರೀಕ್ಷೆಯನ್ನು ಪೂರ್ಣಗೊಳಿಸಲು ಉದ್ದೇಶಿಸಿತ್ತು. ಆದರೆ, ದೇವ ಅನುಜ್ಞೆ ವಿಧಿಗಳ ನಂತರವೇ ವೈಜ್ಞಾನಿಕ ಪರೀಕ್ಷೆ ನಡೆಸಬೇಕೆಂದು ತಂತ್ರಿ (ಮುಖ್ಯ ಅರ್ಚಕ) ಸೂಚಿಸಿದ್ದರು. ಅವರ ಸಲಹೆ ಮೇರೆಗೆ, ಸೋಮವಾರ ಮಧ್ಯಾಹ್ನ 1 ಗಂಟೆಗೆ ಅಗ್ರ ಪೂಜೆ ಮತ್ತು ದೇವಸ್ಥಾನ ಮುಚ್ಚಿದ ನಂತರ ಪರೀಕ್ಷೆ ನಡೆಸುವಂತೆ ನ್ಯಾಯಾಲಯ ಎಸ್‌ಐಟಿಗೆ ನಿರ್ದೇಶನ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.