
ಕೊಲ್ಲಂ/ಕೇರಳ: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಶೀಘ್ರದಲ್ಲೇ ಹಣ ಅಕ್ರಮ ವಹಿವಾಟು ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಪ್ರಕರಣ ದಾಖಲಿಸಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಸಲ್ಲಿಸಿರುವ ದಾಖಲೆಗಳ ಪ್ರತಿಗಳನ್ನು ಪಡೆಯಲು ಕೊಲ್ಲಂ ವಿಚಕ್ಷಣಾ ನ್ಯಾಯಾಲಯ ಶುಕ್ರವಾರ ಇ.ಡಿಗೆ ಅನುಮತಿ ನೀಡಿದೆ.
ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ತಾಮ್ರದ ಕವಚಕ್ಕೆ ಲೇಪಿಸಿದ್ದ ಚಿನ್ನ ಹಾಗೂ ಶ್ರೀಕೋವಿಲ್‌ನ ಬಾಗಿಲ ಚೌಕಟ್ಟಿನ ಚಿನ್ನದ ತೂಕ ಕಡಿಮೆಯಾಗಿರುವ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಇದುವರೆಗೆ ತಿರುವಾಂಕೂರು ದೇವಸ್ವಂ ಮಂಡಳಿಯ(ಟಿಡಿಬಿ) ಇಬ್ಬರು ಮಾಜಿ ಅಧ್ಯಕ್ಷರು ಸೇರಿ 7 ಆರೋಪಿಗಳನ್ನು ಬಂಧಿಸಿದೆ. ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಕೊಲ್ಲಂ ನ್ಯಾಯಾಲಯದಿಂದ ಎಫ್‌ಐಆರ್ ಮತ್ತು ಬಂಧಿತ ಆರೋಪಿಗಳ ರಿಮ್ಯಾಂಡ್ ವರದಿ ಪ್ರತಿಗಳನ್ನು ಇ.ಡಿ ಪಡೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
‘ಪಿಎಂಎಲ್’ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಪ್ರಕರಣದ ಮಾಹಿತಿ ವರದಿ (ಇಸಿಐಆರ್) ಸಲ್ಲಿಸಲು ಇ.ಡಿಗೆ ಈ ದಾಖಲೆಗಳು ಅತ್ಯಗತ್ಯವಾಗಿವೆ.
ಎಸ್‌ಐಟಿ ತನಿಖೆ ನಡೆಸುತ್ತಿರುವ ಎರಡೂ ಪ್ರಕರಣಗಳಲ್ಲಿ ಬೆಂಗಳೂರಿನ ಉದ್ಯಮಿ ಉಣ್ಣಿಕೃಷ್ಣನ್ ಪೋಟಿ ಪ್ರಮುಖ ಆರೋಪಿಯಾಗಿದ್ದಾರೆ. ಇ.ಡಿ ಈಗಾಗಲೇ ಉಣ್ಣಿಕೃಷ್ಣನ್ ಪೋಟಿ ಭಾಗಿಯಾಗಿರುವ ಹಣ ಅಕ್ರಮ ವರ್ಗಾವಣೆಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದೆ.
ಇ.ಡಿ ತನಿಖೆ ಬಗ್ಗೆ ಎಸ್‌ಐಟಿ ಆಕ್ಷೇಪ ವ್ಯಕ್ತಪಡಿಸಿತ್ತು. ಸಮಾನಾಂತರ ತನಿಖೆಯು ಒಟ್ಟಾರೆ ಪ್ರಕರಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಸ್‌ಐಟಿ ವಾದಿಸಿತ್ತು. ಆದರೆ, ವಿಚಕ್ಷಣಾ ನ್ಯಾಯಾಲಯ, ಇ.ಡಿ ಮನವಿ ನ್ಯಾಯಸಮ್ಮತವಾಗಿದೆ ಎಂದು ಅಭಿಪ್ರಾಯಪಟ್ಟಿತು. ಎಸ್‌ಐಟಿ ತನಿಖೆಯ ದಾಖಲೆಗಳ ಪ್ರತಿಗಳನ್ನು ನೀಡುವಂತೆ ಇ.ಡಿ ಸಲ್ಲಿಸಿದ್ದ ಮನವಿಯನ್ನು ಮೊದಲು ಪತ್ತನಂತಿಟ್ಟ ಮತ್ತು ರಾನ್ನಿ ಕೋರ್ಟ್ ತಿರಸ್ಕರಿಸಿದ್ದವು. ಇದರ ವಿರುದ್ಧ ಇ.ಡಿ. ಕೇರಳ ಹೈಕೋರ್ಟ್ ಮೊರೆಹೋಗಿತ್ತು. ಹೈಕೋರ್ಟ್ ಸೂಚನೆಯಂತೆ ಕೊಲ್ಲಂ ವಿಚಕ್ಷಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.