
ಉಣ್ಣಿಕೃಷ್ಣನ್ ಪೋಟಿ, ಶಬರಿಮಲೆ
(ಎಕ್ಸ್ ಚಿತ್ರ)
ಕೊಲ್ಲಂ: ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ದೇಗುಲದ ಶ್ರೀಕೋವಿಲ್ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿ ಅವರಿಗೆ ಕೇರಳದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆದರೂ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನ ಕಳವು ಪ್ರಕರಣದಲ್ಲಿ ಬಂಧಿತರಾಗಿರುವ ಪೋಟಿ ಅವರು ಸದ್ಯ ಜೈಲಿನಲ್ಲೇ ಕಾಲ ಕಳೆಯಬೇಕಿದೆ.
ಶ್ರೀಕೋವಿಲ್ ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ಕಳವು ಪ್ರಕರಣದಲ್ಲಿ ವಿಜಿಲೆನ್ಸ್ ನ್ಯಾಯಾಲಯ ಇಂದು (ಬುಧವಾರ) ಜಾಮೀನು ಮಂಜೂರು ಮಾಡಿದೆ.
90 ದಿನಗಳ ಅವಧಿ ಮುಗಿದರೂ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪ ಪಟ್ಟಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಪೋಟಿ ಅವರು ಜಾಮೀನು ಕೋರಿದ್ದರು.
ಈವರೆಗೆ ಎರಡು ಪ್ರಕರಣಗಳಲ್ಲಿ ಪೋಟಿ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಇಬ್ಬರು ಮಾಜಿ ಅಧ್ಯಕ್ಷರು ಸೇರಿದಂತೆ 12 ಮಂದಿಯನ್ನು ಎಸ್‌ಐಟಿ ಬಂಧಿಸಿದೆ.
ಜಾಮೀನು ನೀಡಿರುವ ಕಾರಣ ಹಾಗೂ ಷರತ್ತುಗಳ ಕುರಿತು ವಿವರವಾದ ಆದೇಶ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಶಬರಿಮಲೆ ದೇಗುಲದ ಚಿನ್ನ ನಾಪತ್ತೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಕೇರಳ, ಕರ್ನಾಟಕ, ತಮಿಳುನಾಡಿನ 21 ಸ್ಥಳಗಳಲ್ಲಿ ಮಂಗಳವಾರ ದಾಳಿ ನಡೆಸಿದ್ದರು.
ರಾಜಕೀಯವಾಗಿ ಸೂಕ್ಷ್ಮವಾದ ಈ ಪ್ರಕರಣವನ್ನು ಕೇರಳ ಹೈಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ರಾಜ್ಯ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.