ADVERTISEMENT

ಶಬರಿಮಲೆ ದೇಗುಲದ ಚಿನ್ನ ಕಳವು; ಸಾಕ್ಷ್ಯ ಸಂಗ್ರಹ ಪೂರ್ಣ:ಕೇರಳಕ್ಕೆ ಮರಳಿದ ಎಸ್‌ಐಟಿ

ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣ; ಕರ್ನಾಟಕ, ತಮಿಳುನಾಡಿನಲ್ಲಿ ಶೋಧ

ಪಿಟಿಐ
Published 26 ಅಕ್ಟೋಬರ್ 2025, 14:13 IST
Last Updated 26 ಅಕ್ಟೋಬರ್ 2025, 14:13 IST
ಶಬರಿಮಲೆ ದೇಗುಲ (ಸಾಂದರ್ಭಿಕ ಚಿತ್ರ)
ಶಬರಿಮಲೆ ದೇಗುಲ (ಸಾಂದರ್ಭಿಕ ಚಿತ್ರ)   

ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸಾಕ್ಷ್ಯಾಧಾರಗಳ ಸಂಗ್ರಹ ಕಾರ್ಯವನ್ನು ಪೂರ್ಣಗೊಳಿಸಿ ಕೇರಳಕ್ಕೆ ಭಾನುವಾರ ಹಿಂತಿರುಗಿದೆ.

‌ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೋಟಿ ಅವರನ್ನು ಕರ್ನಾಟಕದ ಬಳ್ಳಾರಿ, ಬೆಂಗಳೂರು ಹಾಗೂ ತಮಿಳುನಾಡಿನ ಚೆನ್ನೈಗೆ ಕರೆದೊಯ್ಯಲಾಗಿತ್ತು. ಎಸ್‌ಐಟಿ  ಅಧಿಕಾರಿಗಳು ಹಾಗೂ ಪೋಟಿ ಅವರು ತಿರುವನಂತಪುರದ ಅಪರಾಧ ವಿಭಾಗದ ಕಚೇರಿಗೆ ವಾಪಸ್‌ ಆಗಿದ್ದಾರೆ.

ಶುಕ್ರವಾರ ಎಸ್‌ಐಟಿ ಅಧಿಕಾರಿಗಳು ಬಳ್ಳಾರಿಗೆ ಭೇಟಿ ನೀಡಿ, ಆಭರಣ ಮಳಿಗೆ ಮಾಲೀಕ ಗೋವರ್ಧನ್‌ ಅವರ ಬಳಿ ದಾಖಲೆಗಳನ್ನು ಪರಿಶೀಲಿಸಿದ್ದರು. ಇವರು ಶ್ರೀಕೋವಿಲ್‌ನ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳಿಗೆ ಚಿನ್ನಲೇಪನಕ್ಕಾಗಿ ಹಣಕಾಸು ಒದಗಿಸಿದ್ದರು. ಆದರೆ, ಇದನ್ನು ಪೋಟಿ ಅವರ ಹೆಸರಿನಲ್ಲಿ ಪ್ರಾಯೋಜಿಸಲಾಗಿತ್ತು.

ADVERTISEMENT

ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಪೋಟಿ ಅವರ ನಿವಾಸ ಹಾಗೂ 2019ರಲ್ಲಿ ದ್ವಾರಪಾಲಕ ಮೂರ್ತಿಗಳಿಂದ ಚಿನ್ನಲೇಪಿತ ಕವಚವನ್ನು ಬೇರ್ಪಡಿಸಿ ಹೊಸದಾಗಿ ಚಿನ್ನಲೇಪನ ಮಾಡಿದ್ದ ಚೆನ್ನೈನ ಸ್ಮಾರ್ಟ್‌ ಕ್ರಿಯೇಷನ್‌ ಕಚೇರಿಯಲ್ಲಿ ಎಸ್‌ಐಟಿ ಅಧಿಕಾರಿಗಳು ಏಕಕಾಲದಲ್ಲಿ ಶೋಧ ಕಾರ್ಯ ನಡೆಸಿದರು.

‘ಶೋಧ ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡ ದಾಖಲೆಗಳನ್ನು ನ್ಯಾಯಾಲಯಕ್ಕೆ ಶೀಘ್ರದಲ್ಲೇ ಸಲ್ಲಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾನ್ನಿಯ ಜೆಎಫ್‌ಸಿಎಂ ನ್ಯಾಯಾಲಯವು ಪೋಟಿ ಅವರನ್ನು ಅ.30ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿತ್ತು.

ಶಬರಿಮಲೆ ಆಡಳಿತಾಧಿಕಾರಿ ಬಿ.ಮುರಾರಿ ಬಾಬು ಅವರನ್ನು ಅ.28ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದೆ.

ಪರಿಶೀಲನೆ ಕಾರ್ಯ ಮುಂದುವರಿಕೆ

ಶಬರಿಮಲೆ ದೇಗುಲದ ಮುಖ್ಯ ಭದ್ರತಾ ಕೊಠಡಿಯಲ್ಲಿರುವ ಚಿನ್ನಾಭರಣ ಸೇರಿದಂತೆ ಎಲ್ಲ ಬೆಲೆಬಾಳುವ ವಸ್ತುಗಳ ಪರಿಶೀಲನೆ ಮತ್ತು ಪಟ್ಟಿ ಮಾಡಲು ಹೈಕೋರ್ಟ್‌ ಸೂಚನೆ ಮೇರೆಗೆ ನೇಮಕಗೊಂಡಿರುವ ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಟಿ.ಶಂಕರನ್‌ ಅವರು ಭಾನುವಾರವೂ ಅರನ್ಮುಲ ಭದ್ರತಾ ಕೊಠಡಿಯಲ್ಲಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.