ADVERTISEMENT

ಶಬರಿಮಲೆ ಚಿನ್ನ ನಾಪತ್ತೆ: ಟಿಡಿಬಿ ಮಾಜಿ ಸದಸ್ಯನ ಬಂಧನ

ಪಿಟಿಐ
Published 29 ಡಿಸೆಂಬರ್ 2025, 13:29 IST
Last Updated 29 ಡಿಸೆಂಬರ್ 2025, 13:29 IST
   

ತಿರುವನಂತಪುರ: ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಸದಸ್ಯ ಎನ್‌. ವಿಜಯಕುಮಾರ್‌ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ಬಂಧಿಸಿದೆ.

ಶ್ರೀಕೋವಿಲ್‌ನ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳಲ್ಲಿನ ಚಿನ್ನ ಕಳವು ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಎ. ಪದ್ಮಕುಮಾರ್‌ ಅವರು ಟಿಡಿಬಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ವಿಜಯಕುಮಾರ್‌ ಸದಸ್ಯರಾಗಿದ್ದರು.

2019ರಲ್ಲಿ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚಗಳು ಮತ್ತು ಶ್ರೀಕೋವಿಲ್‌ ಬಾಗಿಲಿನ ಚೌಕಟ್ಟುಗಳನ್ನು ಚಿನ್ನಲೇಪನಕ್ಕಾಗಿ ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೋಟಿ ಅವರಿಗೆ ಹಸ್ತಾಂತರಿಸಲು ಅನುಮೋದನೆ ನೀಡಲಾಗಿತ್ತು. ವಿಜಯಕುಮಾರ್‌ ಅವರನ್ನು ತಿರುವನಂತಪುರದಲ್ಲಿರುವ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದು, ನಂತರ ಅವರನ್ನು ಬಂಧಿಸಲಾಗಿದೆ. ಅವರನ್ನು ಕೊಲ್ಲಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಈ ಪ್ರಕರಣದಲ್ಲಿ ವಿಜಯಕುಮಾರ್‌ ಅವರು ಎಸ್‌ಐಟಿ ಬಂಧಿಸಿದ 10ನೇ ಆರೋಪಿಯಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇದಕ್ಕೂ ಮೊದಲು, ಕೇರಳ ಹೈಕೋರ್ಟ್‌ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಪರಿಗಣಿಸುವಾಗ, ಟಿಡಿಬಿಯ ಮಾಜಿ ಸದಸ್ಯರಾದ ಕೆ.ಪಿ. ಶಂಕರದಾಸ್‌ ಮತ್ತು ವಿಜಯಕುಮಾರ್‌ ಅವರ ಪಾತ್ರದ ಕುರಿತು ತನಿಖೆ ನಡೆಸದಿರುವುದಕ್ಕೆ ಎಸ್‌ಐಟಿಯನ್ನು ಪ್ರಶ್ನಿಸಿತ್ತು. ಈ ತಿಂಗಳ ಆರಂಭದಲ್ಲಿ, ತನಿಖೆಯನ್ನು ಪೂರ್ಣಗೊಳಿಸಲು ಎಸ್‌ಐಟಿಗೆ ಹೆಚ್ಚುವರಿ ಆರು ತಿಂಗಳ ಕಾಲಾವಕಾಶ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.