
ತಿರುವನಂತಪುರ: ಕೇರಳದ ಐತಿಹಾಸಿಕ ಧಾರ್ಮಿಕ ಕೇಂದ್ರ ಶಬರಿಮಲೆ ಅಯ್ಯಪ್ಪ ದೇಗುಲವು ಇದೀಗ ಚಿನ್ನ ಕಳ್ಳತನ ಪ್ರಕರಣದಲ್ಲಿ ದೇಶ ಹಾಗೂ ವಿದೇಶಗಳಲ್ಲೂ ಸುದ್ದಿಯಲ್ಲಿದೆ.
ದೇಗುಲದ ಬಾಗಿಲಿನಲ್ಲಿ ಬಳಸಲಾಗಿದ್ದ ಚಿನ್ನವನ್ನು ಕಳವು ಮಾಡಲಾಗಿದೆ ಎನ್ನುವ ಆರೋಪ ಬೆಂಗಳೂರು ಮೂಲದ ಓರ್ವ ಮಲಯಾಳಿ, ಆತನ ಸಹಚರರು, ದೇಗುಲದ ನಿರ್ವಹಣೆ ವಹಿಸಿಕೊಂಡಿರುವ ಟ್ರಾವಂಕೂರ್ ದೇವಸ್ವಂ ಬೋರ್ಡ್‌ನ (ಟಿಬಿಡಿ) ಕೆಲವು ಅಧಿಕಾರಿಗಳು ವಿರುದ್ಧ ಕೇಳಿ ಬಂದಿದೆ. 1998–99ರಲ್ಲಿ ಇದನ್ನು ಉದ್ಯಮಿ ವಿಜಯ್ ಮಲ್ಯ ಅವರ ಸಹಕಾರದೊಂದಿಗೆ ನಿರ್ಮಾಣ ಮಾಡಲಾಗಿತ್ತು. ಹಾಗಾದರೆ ಏನಿದು ಚಿನ್ನಕಳವು ವಿವಾದ?
ದೇಗುಲದ ಗರ್ಭಗುಡಿಯ ಬಾಗಿಲಿನ ಎರಡೂ ಬದಿಯಲ್ಲಿ ಇರಿಸಲಾಗಿರುವ ಎರಡು ದ್ವಾರಪಾಲಕ ಮೂರ್ತಿಗಳ ಹಾಗೂ ಬಾಗಿಲಿನ ಚೌಕಟ್ಟಿನ ಚಿನ್ನದ ಲೇಪನಗಳು ಕಾಣೆಯಾಗಿದ್ದವು. ತಾಮ್ರದಲ್ಲಿ ಮಾಡಿದ ಬಾಗಿಲಿಗೆ ಲೇಪನ ಮಾಡಲು 30 ಕೆಜಿಗಿಂತ ಹೆಚ್ಚು 24 ಕ್ಯಾರೆಟ್ ಚಿನ್ನವನ್ನು ಬಳಸಲಾಗಿತ್ತು. ದ್ವಾರಪಾಲಕ ಮೂರ್ತಿಗಳಿಗೆ ಹಾಗೂ ಬಾಗಿಲನ ಚೌಕಟ್ಟಿಗೆ ಲೇಪಿಸಲು ಸುಮಾರು 2 ಕೆ.ಜಿ ಚಿನ್ನ ಬಳಸಲಾಗಿತ್ತು.
ಚಿನ್ನದ ಲೇಪನ ಕೆಲಸ ಕೈಗೊಳ್ಳಲು ದೇಗುಲವು 2019ರಲ್ಲಿ ನಿರ್ಧರಿಸಿತ್ತು. ಇದಕ್ಕೆ ಪ್ರಾಯೋಜಕತ್ವ ನೀಡುವುದಾಗಿ ಈ ಹಿಂದೆ ದೇಗುಲದ ಅರ್ಚಕರಿಗೆ ಸಹಾಯಕನಾಗಿ ಕೆಲಸ ಮಾಡಿದ್ದ, ಬೆಂಗಳೂರು ಮೂಲದ ಉದ್ಯಮಿ ಉನ್ನೀಕೃಷ್ಣನ್ ಪೋಟಿ ಹೇಳಿದ್ದರು. ಲೇಪನಗಳನ್ನು ಪ್ರಯೋಜಕರಿಗೆ ಹಸ್ತಾಂತರಿಸುವಾಗ ದಾಖಲೆಗಳಲ್ಲಿ ಅದನ್ನು ‘ತಾಮ್ರ’ ಎಂದು ನಮೂದು ಮಾಡಲಾಗಿತ್ತು. ಅಲ್ಲದೆ ದೇಗುಲದಲ್ಲಿ ಯಾವುದೇ ಪ್ರಮುಖ ಕೆಲಸಗಳನ್ನು ಕೈಗೆತ್ತಿಕೊಳ್ಳುವಾಗ ದೇವಸ್ವಂ ಕೇರಳ ಹೈಕೋರ್ಟ್ ಅನುಮತಿ ಪಡೆಯಬೇಕಾದ್ದು ಕಡ್ಡಾಯ. ಆದರೆ ಈ ನಿಯಮವನ್ನೂ ಉಲ್ಲಂಘಿಸಲಾಗಿತ್ತು. ಲೇಪನವನ್ನು ಚೆನ್ನೈ ಮೂಲದ ಸ್ಮಾರ್ಟ್ ಕ್ರಿಯೇಷನ್ಸ್ ಎನ್ನುವ ಸಂಸ್ಥೆಗೆ ನೀಡಲಾಗಿತ್ತು. ಅದನ್ನು ಪೋಟಿ ದೇಗುಲಕ್ಕೆ ಹಿಂದಿರುಗಿಸುವಾಗ ಅದರ ತೂಕ 4.5 ಕೆ.ಜಿಗಿಂತ ಕಡಿಮೆ ಇದ್ದರೂ, ಯಾವುದೇ ತನಿಖೆ ಮಾಡಿರಲಿಲ್ಲ.
ಟಿಡಿಬಿ ಅಧಿಕಾರಿಗಳ ಮೌನ ಸಮ್ಮತಿಯಿಂದಲೇ ಪೋಟಿ ಚಿನ್ನ ಕಳವು ಮಾಡಿದ್ದಾನೆ ಎನ್ನುವ ಶಂಕೆ ಮೂಡಿತು. ದಕ್ಷಿಣ ಭಾರತದ ವಿವಿಧ ಕಡೆಗಳಲ್ಲಿ ಈ ಚಿನ್ನದ ಲೇಪನವನ್ನು ತೋರಿಸಿದ್ದ ಪೋಟಿ, ತಾನು ಕೈಗೊಳ್ಳಿರುವ ಕೆಲಸಕ್ಕೆ ದೇಣಿಗೆಯನ್ನೂ ಸಂಗ್ರಹಿಸಿದ್ದ. ಚಿನ್ನದ ಲೇಪನವನ್ನು ನಿರ್ವಹಣೆಗಾಗಿ ಚೆನ್ನೈಗೆ ತೆಗೆದುಕೊಂಡು ಹೋಗಲಾಗಿತ್ತು. ಅದರಿಂದ ಚಿನ್ನ ಕದಿಯುವ ಸಲುವಾಗಿ ಹೀಗೆ ಮಾಡಿದ್ದಾನೆ ಎನ್ನುವ ಶಂಕೆ ಮೂಡಿತು.
ಪೂರ್ವಾನುಮತಿ ಇಲ್ಲದೆ ಒಂದು ದಿನ ಮುಂಚೆಯೇ ಮೂರ್ತಿಗಳಿಂದ ಚಿನ್ನದ ಲೇಪನಗಳನ್ನು ಕಳಚಿ ಚೆನ್ನೈಗೆ ತೆಗೆದುಕೊಂಡು ಹೋಗಲಾಗಿದೆ ಎಂದು ದೇಗುಲದ ವ್ಯವಹಾರಗಳನ್ನು ನೋಡಿಕೊಳ್ಳಲು ಕೇರಳ ಹೈಕೋರ್ಟ್ ನೇಮಿಸಿದ್ದ ವಿಶೇಷ ಆಯುಕ್ತರು 2025ರ ಸೆಪ್ಟೆಂಬರ್ 8 ರಂದು ವರದಿ ನೀಡಿದರು. ಬಳಿಕ ಈ ಲೋಪ ಆಗಿದ್ದನ್ನು ಟಿಡಿಬಿ ಒಪ್ಪಿಕೊಂಡಿತು. 2019ರಲ್ಲಿ ಪೋಟಿಗೆ ಲೇಪನ ನೀಡಿದ ಬಳಿಕ ತೂಕದಲ್ಲಿ ವ್ಯತ್ಯಾಸವಾಗಿದ್ದನ್ನು ಕೋರ್ಟ್ ವಿಚಾರಣೆ ವೇಳೆ ಪತ್ತೆ ಮಾಡಿತು.
ಈ ಬಗ್ಗೆ ತನಿಖೆ ನಡೆಸಿ ಎಂದು ಕೋರ್ಟ್ ಟಿಡಿಬಿಯ ವಿಚಕ್ಷಣಾ ವಿಭಾಗಕ್ಕೆ ಆದೇಶಿತು. ಅವ್ಯವಹಾರದಲ್ಲಿ ದೇಗುಲ ಸಮಿತಿಯ ಅಧಿಕಾರಿಗಳೇ ಭಾಗಿಯಾಗಿದ್ದಾರೆ ಎನ್ನುವುದನ್ನು ಪತ್ತೆ ಮಾಡಿತು. ಇದಾದ ಬಳಿಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ. ಹಾಗೂ ಕೆ.ವಿ ಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತು.
ಪೋಟಿ ಹಾಗೂ ಟಿಡಿಬಿಯ ಮಾಜಿ ಅಧಿಕಾರಿ ಮುರಾರಿ ಬಾಬುವನ್ನು ಎಸ್‌ಐಟಿ ಬಂಧಿಸಿದೆ. ಬೆಂಗಳೂರು ಮೂಲದ ಅನಂತಸುಬ್ರಹ್ಮಣ್ಯಂ, ರಮೇಶ್ ಹಾಗೂ ಕಲ್ಪೇಶ್ ಮೇಲೂ ಎಸ್‌ಐಟಿ ಕಣ್ಣಿಟ್ಟಿದೆ. ಈ ಬಗ್ಗೆ ದಾಖಲಾದ ಎರಡು ದೂರಿನಲ್ಲಿ 18 ಮಂದಿ ವಿರುದ್ಧ ಆರೋಪ ಮಾಡಲಾಗಿದೆ. ಈ ಪೈಕಿ ಹೆಚ್ಚಿನವರು ಟಿಡಿಬಿ ನೌಕರರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕಾರವಧಿಯಲ್ಲೇ ಈ ಅವ್ಯವಹಾರ ನಡೆದಿದೆ. ಬೋರ್ಡ್‌ನ ಅಧ್ಯಕ್ಷರು ಹಾಗೂ ಸದಸ್ಯರನ್ನು ಸರ್ಕಾರವೇ ನೇಮಕ ಮಾಡುತ್ತದೆ. ಹೀಗಾಗಿ ಎಡರಂಗ ಸರ್ಕಾರಕ್ಕೆ ಈ ವಿವಾದ ಹಿನ್ನಡೆ ಉಂಟು ಮಾಡಿದೆ. ಅಲ್ಲದೆ ‘ಜಾಗತಿಕ ಅಯ್ಯಪ್ಪ ಸಂಗಮಂ’ ನಡೆದ ಕೆಲವೇ ದಿನಗಳಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯ ಸಂಸ್ಥೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಇರುವುದರಿಂದ ಹಿಂದೂ ಸಂಘಟನೆಗಳ ವಿಶ್ವಾಸಕ್ಕೆ ತೆಗೆದುಕೊಳ್ಳಲು ಆ ಸಮಾವೇಶವನ್ನು ಪಿಣರಾಯಿ ಸರ್ಕಾರ ಆಯೋಜಿಸಿತ್ತು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದರು. ವಿರೋಧ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಕೂಡ ಈ ಪ್ರಕರಣದ ಲಾಭ ಪಡೆಯಲು ಯತ್ನಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.