ADVERTISEMENT

ಶಬರಿಮಲೆ: ಪೊಲೀಸರೊಂದಿಗೆ ಸಚಿವರ ವಾಕ್ಸಮರ

ಕೇಂದ್ರ ಸಚಿವರಿಗೆ ಮಾರ್ಗಮಧ್ಯೆ ತಡೆ l ಮೌಖಿಕ ಆದೇಶ ಪಾಲಿಸಲು ಅಧಿಕಾರಿ ನಕಾರ

ಪಿಟಿಐ
Published 21 ನವೆಂಬರ್ 2018, 20:00 IST
Last Updated 21 ನವೆಂಬರ್ 2018, 20:00 IST
ಇರುಮುಡಿ ಹೊತ್ತ ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣನ್‌
ಇರುಮುಡಿ ಹೊತ್ತ ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣನ್‌   

ಶಬರಿಮಲೆ/ಪಂಪಾ: ಶಬರಿಗಿರಿ ಅಯ್ಯಪ್ಪ ದೇಗುಲಕ್ಕೆ ಬುಧವಾರ ಬೆಂಬಲಿಗರೊಂದಿಗೆ ತಮಿಳುನಾಡಿನಿಂದ ಬಸ್‌ನಲ್ಲಿ ಇರುಮುಡಿ ಹೊತ್ತು ಬಂದಿದ್ದ ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣನ್‌ ಅವರನ್ನು ಪೊಲೀಸರು ಪಂಪಾದಲ್ಲಿಯೇ ತಡೆದರು.

ಇದರಿಂದ ಸಚಿವರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸಚಿವರು ಸರ್ಕಾರಿ ವಾಹನದಲ್ಲಿ ಬಂದರೆ ಮಾತ್ರ ಪ್ರವೇಶ ನೀಡುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಚಂದ್ರ ಹೇಳಿದರು. ‘ನಾನು ಇಲ್ಲಿ ಸಚಿವನಾಗಿ ಅಲ್ಲ, ಅಯ್ಯಪ್ಪ ಭಕ್ತನಾಗಿ ಬಂದಿದ್ದೇನೆ’ ಎಂದು ಪೊನ್‌ ರಾಧಾಕೃಷ್ಣನ್‌ ತಿರುಗೇಟು ನೀಡಿದರು.

ಅಯ್ಯಪ್ಪ ದೇವಸ್ಥಾನಕ್ಕೆ ಹೊರಟ ಖಾಸಗಿ ವಾಹನಗಳನ್ನು ಪಂಪಾದಲ್ಲಿ ತಡೆಯುತ್ತಿರುವ ಪೊಲೀಸರ ಕ್ರಮವನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಭಕ್ತರ ಖಾಸಗಿ ವಾಹನಗಳಿಗೂ ಪ್ರವೇಶ ನೀಡುವಂತೆ ಸೂಚಿಸಿದರು.

ADVERTISEMENT

ಸಚಿವರ ಮೌಕಿಕ ಆದೇಶ ಪಾಲಿಸಲು ಸ್ಪಷ್ಟವಾಗಿ ನಿರಾಕರಿಸಿದ ಯತೀಶ್‌ ಚಂದ್ರ, ಲಿಖಿತ ಆದೇಶ ನೀಡಿದರೆ ಮಾತ್ರ ಕ್ರಮ ಕೈಗೊಳ್ಳಲು ಯೋಚಿಸುವುದಾಗಿ ಮಾರುತ್ತರ ನೀಡಿದರು.

ಇದರಿಂದ ಕೆರಳಿದ ಸಚಿವರು ತಮ್ಮ ಬೆಂಬಲಿಗರೊಂದಿಗೆ ಬಸ್‌ನಲ್ಲಿ ಮರಳಿ ಹೋದರು. ಕೇಂದ್ರ ಸಚಿವರ ಜತೆ ದುರ್ವರ್ತನೆ ತೋರಿದ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವರಿಗೆ ದೂರು ನೀಡುವುದಾಗಿ ಬಿಜೆಪಿ ಕಾರ್ಯಕರ್ತರು ತಿಳಿಸಿದ್ದಾರೆ.

ಜನರು ಪಾಠ ಕಲಿಸುತ್ತಾರೆ: ಶಬರಿಮಲೆಯಲ್ಲಿ ನಿಷೇಧಾಜ್ಞೆ ಮತ್ತು ಪೊಲೀಸ್‌ ಸರ್ಪಗಾವಲು ಹಾಕುವ ಮೂಲಕ ಅಯ್ಯಪ್ಪ ಭಕ್ತರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಕೇರಳ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಪೊನ್‌ ರಾಧಾಕೃಷ್ಣನ್‌ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

73 ಜನರಿಗೆ ಜಾಮೀನು:ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ ಕಳೆದ ವಾರ ಬಂಧಿಸಲಾಗಿದ್ದ ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್‌ ಸೇರಿದಂತೆ 73 ಜನರು ಬುಧವಾರ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಕೊರತೆ ಮುಚ್ಚಲು ಬಂಧನ:ಶಬರಿಗಿರಿಯಲ್ಲಿ ಭಕ್ತರಿಗೆ ಒದಗಿಸಲಾದ ಮೂಲಸೌಕರ್ಯ ಕೊರತೆಯನ್ನು ಮುಚ್ಚಿ ಹಾಕಲು ಭಕ್ತರನ್ನು ಸಾಮೂಹಿಕವಾಗಿ ಬಂಧಿಸಲಾಗುತ್ತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಸಂಸದರಾದ ನಳಿನ್‌ ಕುಮಾರ್‌ ಕಟೀಲ್‌ ಮತ್ತು ವಿ. ಮುರುಳೀಧರನ್‌ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು.

‘ಆರ್‌ಎಸ್ಎಸ್‌ ಭಾರತದ ತಾಲಿಬಾನ್‌’

ಸಿಪಿಎಂ ಪಾಲಿಟ್‌ ಬ್ಯುರೊ ಸದಸ್ಯ ಎಸ್‌. ರಾಮಚಂದ್ರನ್‌ ಪಿಳ್ಳೈ ಅವರು ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ತಾಲಿಬಾನ್‌ ಮತ್ತು ಖಲಿಸ್ತಾನ್‌ ಉಗ್ರರಿಗೆ ಹೋಲಿಸಿದ್ದಾರೆ. ಶಬರಿಮಲೆಯಲ್ಲಿ ಗಲಭೆ ಸೃಷ್ಟಿಸಲು ಇನ್ನಿಲ್ಲದಂತೆ ಯತ್ನಿಸುತ್ತಿರುವ ಆರ್‌ಎಸ್‌ಎಸ್‌ ಕಾರ್ಯಕರ್ತರು ತಾಲಿಬಾನ್‌ ಮತ್ತು ಖಲಿಸ್ತಾನ್‌ ಉಗ್ರರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಬುಧವಾರ ಆರೋಪಿಸಿದ್ದಾರೆ.

ಶಬರಿಮಲೆಯಲ್ಲಿ ಶಾಂತಿ ಕದಡಲು ಸಂಘ ಪರಿವಾರವೇ ಕಾರಣ. ಅಲ್ಲಿ ಶಾಂತಿ ನೆಲೆಸುವುದು ಆರ್‌ಎಸ್‌ಎಸ್‌ಗೆ ಖಂಡಿತ ಇಷ್ಟ ಇಲ್ಲ ಎಂದು ಅವರು ಹೇಳಿದ್ದಾರೆ.

ನಿಷೇಧಾಜ್ಞೆ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಸುತ್ತಮುತ್ತ ನಿಷೇಧಾಜ್ಞೆ ವಿಧಿಸಿರುವ ಸರ್ಕಾರವನ್ನು ಕೇರಳ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.ನಿಷೇಧಾಜ್ಞೆ ವಿಧಿಸಲು ಇದ್ದ ಕಾರಣಗಳನ್ನು ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಈ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸೂಚನೆ ನೀಡಿದೆ.

ಪ್ರತಿಭಟನಕಾರರು ಮತ್ತು ಭಕ್ತರ ನಡುವಣ ವ್ಯತ್ಯಾಸವನ್ನು ಪೊಲೀಸರು ಹೇಗೆ ಪತ್ತೆ ಹಚ್ಚುತ್ತಾರೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಭಕ್ತರು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ನಾಮಜಪಿಸುವುದು ತಪ್ಪಲ್ಲ ಎಂದು ಹೇಳಿದೆ. ಶಬರಿಮಲೆಯಲ್ಲಿ ನಿಷೇಧಾಜ್ಞೆ ಹೇರಿರುವುದನ್ನು ಪ್ರಶ್ನಿಸಿ ಪ್ರತ್ಯೇಕವಾಗಿ ಸಲ್ಲಿಸಲಾದ ಮೂರು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.

***

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಜನರು ಅದನ್ನು ಸರಿಪಡಿಸುತ್ತಾರೆ

–ಪೊನ್‌ ರಾಧಾಕೃಷ್ಣನ್‌ ,ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.