
ಬಾಗಿಲು ತೆರೆದ ಶಬರಿಮಲೆ ದೇಗುಲ
ಪಿಟಿಐ ಚಿತ್ರ
ಶಬರಿಮಲೆ(ಕೇರಳ): ಮಲಯಾಳಂ ವೃಶ್ಚಿಕ ಮಾಸದ ಮೊದಲ ದಿನವಾದ ಸೋಮವಾರ ವಾರ್ಷಿಕ ಮಂಡಲಂ– ಮಕರವಿಳಕ್ಕು ತೀರ್ಥಯಾತ್ರೆ ಆರಂಭವಾಗಿದ್ದು, ನೂರಾರು ಮಂದಿ ಯಾತ್ರಾರ್ಥಿಗಳು ಶಬರಿಮಲೆಯ ಅಯ್ಯಪ್ಪನ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಸಾಂಪ್ರದಾಯಿಕವಾದ ಕಪ್ಪು ಧಿರಿಸಿನಲ್ಲಿ ಇರುಮುಡಿಯನ್ನು ಹೊತ್ತ ಭಕ್ತರು ಗಂಟೆಗಳ ಕಾಲ ಸಾಲಿನಲ್ಲಿ ನಿಂತು ಅಯ್ಯಪ್ಪನ ದರ್ಶನಕ್ಕೆ ಕಾದಿದ್ದರು. ಹೊಸದಾಗಿ ನೇಮಕಗೊಂಡಿರುವ ಪ್ರಧಾನ ಅರ್ಚಕ ಇ.ಡಿ.ಪ್ರಸಾದ್ ನಂಬೂಥಿರಿ ಅವರು ತಂತ್ರಿಗಳ ಉಪಸ್ಥಿತಿಯಲ್ಲಿ ದೇಗುಲದ ಬಾಗಿಲುಗಳನ್ನು ತೆರೆಯುತ್ತಿದ್ದಂತೆಯೇ ಅಯ್ಯಪ್ಪನ ನಾಮ ಸ್ಮರಣೆ ಮುಗಿಲುಮುಟ್ಟಿದೆ ಎಂದು ತಿರವಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.
ಬೆಳಗ್ಗಿನ ಜಾವ 3 ಗಂಟೆಗೆ ದೇಗುಲದ ಬಾಗಿಲುಗಳನ್ನು ತೆರೆಯಲಾಗಿದ್ದು, ಆಗಿನಿಂದಲೂ ಭಕ್ತರು ಭಾರಿ ಸಂಖ್ಯೆಯಲ್ಲಿ ಸಾಲುಗಳಲ್ಲಿ ನಿಂತಿದ್ದರು. ಮುಂದಿನ ಎರಡು ತಿಂಗಳು ಈ ತೀರ್ಥಯಾತ್ರೆ ನಡೆಯಲಿದ್ದು ಭಕ್ತರು ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ ಎಂದೂ ಮಂಡಳಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.