
ಸಿಪಿಎಂ
ತಿರುವನಂತಪುರ: ಶಬರಿಮಲೆ ದೇವಾಲಯದ ಮುಖ್ಯ ಅರ್ಚಕ ಕಂಡರಾರು ರಾಜೀವರು ಅವರು ‘ಮಹಾ ಕಳ್ಳ’ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಹೇಳಿದ್ದಾರೆ.
‘ಚಿನ್ನ ದರೋಡೆಯಲ್ಲಿ ಭಾಗಿಯಾಗಿರುವ ಮಹಾ ಕಳ್ಳರ ಪಟ್ಟಿಯಲ್ಲಿ ಅರ್ಚಕ ಕೂಡ ಇದ್ದರು. ತನಿಖೆ ಇನ್ನೂ ಪ್ರಗತಿಯಲ್ಲಿದೆ. ಪ್ರಕರಣದಲ್ಲಿ ಇತರ ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡರೂ, ಅರ್ಚಕನ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಗೋವಿಂದನ್ ಅವರು ಪ್ರಶ್ನಿಸಿದ್ದಾರೆ.
‘ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿ ಸಿಪಿಎಂ ನಂಟಿನ ವ್ಯಕ್ತಿ ಎಂದು ಆರಂಭದಲ್ಲಿ ಕಾಂಗ್ರೆಸ್ ಆರೋಪಿಸಿತ್ತಾದರೂ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ವಿ. ವೇಣುಗೋಪಾಲ್ ಕೇರಳ ದೇವಸ್ವಂ ಸಚಿವರಾಗಿದ್ದಾಗ ಅವರು ಶಬರಿಮಲೆಗೆ ಪ್ರವೇಶಿಸಿದ್ದಾರೆ ಎನ್ನುವುದು ಬಹಿರಂಗವಾಗಿದೆ’ ಎಂದು ಗೋವಿಂದನ್ ಹೇಳಿದ್ದಾರೆ.
ಚಿನ್ನ ದರೋಡೆ ಪ್ರಕರಣದಲ್ಲಿ ಶಬರಿಮಲೆ ದೇವಾಲಯದ ಮುಖ್ಯ ಅರ್ಚಕ ಕಂಡರಾರು ರಾಜೀವರು ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯವು ಇತ್ತೀಚೆಗಷ್ಟೆ ಜಾಮೀನು ನೀಡಿತ್ತು.
ಶಬರಿಮಲೆ ದೇವಸ್ಥಾನಕ್ಕೆ 10–50ರ ವಯಸ್ಸಿನ ಮಹಿಳೆಯರ ಪ್ರವೇಶವನ್ನು ವಿರೋಧಿಸಿದ್ದಕ್ಕಾಗಿ, ಚಿನ್ನ ದರೋಡೆ ಪ್ರಕರಣದಲ್ಲಿ ಅರ್ಚಕ ರಾಜೀವರು ಅವರನ್ನು ಬಂಧಿಸಲಾಗಿದೆ ಎಂದು ಅವರ ಜಾಮೀನು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಅರ್ಚಕನನ್ನು ಸಿಲುಕಿಸಲಾಗಿದೆ: ಕಾಂಗ್ರೆಸ್
ತಿರುವನಂತಪುರ (ಪಿಟಿಐ): ಚಿನ್ನ ದರೋಡೆ ಪ್ರಕರಣದಲ್ಲಿ ಶಬರಿಮಲೆ ಪ್ರಧಾನ ಅರ್ಚಕನನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಭಾನುವಾರ ಆರೋಪಿಸಿದ್ದಾರೆ.
ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಅವರನ್ನು ಬಂಧಿಸಿರುವುದರ ಹಿಂದೆ ರಾಜಕೀಯ ಹಸ್ತಕ್ಷೇಪದ ಶಂಕೆಯಿದೆ ಎಂದು ಅವರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಖ್ಯಮಂತ್ರಿ ಕಚೇರಿಯ ನಿಯಂತ್ರಣದಲ್ಲಿದೆ.
ತನಿಖೆಯ ದಿಕ್ಕನ್ನು ಬೇರೆಡೆಗೆ ತಿರುಗಿಸಲು ಮತ್ತು ಅದು ದೇವಸ್ವಂ ಸಚಿವ ವಿ.ಎನ್. ವಾಸವನ್ ಮತ್ತು ಮಾಜಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರನ್ನು ತಲುಪದಂತೆ ನೋಡಿಕೊಳ್ಳಲು ಅರ್ಚಕನನ್ನು ಬಂಧಿಸಲಾಯಿತು’ ಎಂದು ಆರೋಪಿಸಿದ್ದಾರೆ.
‘ಕೇರಳ ಹೈಕೋರ್ಟ್ ನೀಡಿದ ನಿರ್ದೇಶನಗಳನ್ನು ಪಾಲಿಸಲು ಎಸ್‌ಐಟಿ ವಿಫಲವಾಗಿದೆ ಮತ್ತು ಪ್ರಕರಣದ ಹಿಂದಿನ ಪಿತೂರಿಯ ಬಗ್ಗೆ ಅದು ಸರಿಯಾಗಿ ತನಿಖೆ ನಡೆಸಲಿಲ್ಲ. ಅಯ್ಯಪ್ಪ ಸ್ವಾಮಿಯನ್ನು ತಂದೆಯೆಂದು ಪೂಜಿಸುವ ಅರ್ಚಕನನ್ನು ಯಾವುದೇ ಪುರಾವೆಯಿಲ್ಲದೆ 41 ದಿನಗಳ ಕಾಲ ಜೈಲಿನಲ್ಲಿ ಇರಿಸಲಾಯಿತು’ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.