ADVERTISEMENT

Sabarimala Gold Theft Row | ಸಾಕ್ಷ್ಯ ಸಂಗ್ರಹ: ಪ್ರಮುಖ ಆರೋಪಿ ಬೆಂಗಳೂರಿಗೆ

ಪಿಟಿಐ
Published 24 ಅಕ್ಟೋಬರ್ 2025, 13:45 IST
Last Updated 24 ಅಕ್ಟೋಬರ್ 2025, 13:45 IST
ಶಬರಿಮಲೆ ದೇವಸ್ಥಾನ (ಸಾಂದರ್ಭಿಕ ಚಿತ್ರ)
ಶಬರಿಮಲೆ ದೇವಸ್ಥಾನ (ಸಾಂದರ್ಭಿಕ ಚಿತ್ರ)   

ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನದಿಂದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೋಟಿ ಅವರನ್ನು ಸಾಕ್ಷ್ಯಾಧಾರ ಸಂಗ್ರಹಕ್ಕಾಗಿ ಬೆಂಗಳೂರಿಗೆ ಶುಕ್ರವಾರ ಕರೆದೊಯ್ದಿದೆ.

ಪೋಟಿ ಅವರನ್ನು ಚೆನ್ನೈ ಮತ್ತು ಹೈದರಾಬಾದ್‌ಗೂ ಕರೆದೊಯ್ಯುವ ಸಾಧ್ಯತೆಯಿದೆ. ಅಲ್ಲದೆ, ರಾನ್ನಿಯ ಜೆಎಫ್‌ಸಿಎಂ ನ್ಯಾಯಾಲಯವು ಪೋಟಿ ಅವರನ್ನು ಅ.30ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿರುವುದರಿಂದ ಆ ಅವಧಿಯೊಳಗೆ ಸಾಕ್ಷ್ಯಾಧಾರ ಸಂಗ್ರಹ ಕಾರ್ಯವನ್ನು ಪೂರ್ಣಗೊಳಿಸುವ ಗುರಿಯನ್ನು ಎಸ್‌ಐಟಿ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೋಟಿ ಅವರು 2019ರಲ್ಲಿ ದ್ವಾರಪಾಲಕ ಮೂರ್ತಿಗಳಿಂದ ಚಿನ್ನಲೇಪಿತ ಕವಚವನ್ನು ಬೇರ್ಪಡಿಸಿ ಹೊಸದಾಗಿ ಚಿನ್ನ ಲೇಪನಕ್ಕೆಂದು ಅವುಗಳನ್ನು ತಿರುವಾಂಕೂರು ದೇವಸ್ವಂ ಮಂಡಳಿಯಿಂದ ಪಡೆದಿದ್ದರು. ಚೆನ್ನೈ ಮೂಲದ ಸಂಸ್ಥೆಯಲ್ಲಿ ಕವಚಗಳಿಗೆ ಚಿನ್ನಲೇಪನ ಮಾಡಿದ ನಂತರ ಚೆನ್ನೈ, ಬೆಂಗಳೂರು ಮತ್ತು ಕೇರಳದ ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸಿದ್ದಾರೆ. ದಕ್ಷಿಣ ಭಾರತದ ವಿವಿಧ ದೇವಾಲಯಗಳು ಮತ್ತು ಮನೆಗಳಿಗೆ ಅನುಮತಿಯಿಲ್ಲದೆ ಅವುಗಳನ್ನು ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ.

ADVERTISEMENT

ಶಬರಿಮಲೆ ದೇವಸ್ಥಾನದಲ್ಲಿ ಪೋಟಿ ಅವರ ಪ್ರಾಯೋಜಿತ ಕಾರ್ಯಗಳಿಗೆ ಕರ್ನಾಟಕದ ಕೆಲವರು ಹಣಕಾಸು ಒದಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದ್ವಾರಪಾಲಕರ ಮೂರ್ತಿಗಳಲ್ಲಿ ಮತ್ತು ಶ್ರೀಕೋವಿಲ್‌ನ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ನಾಪತ್ತೆ ಪ್ರಕರಣಗಳಲ್ಲಿ ಪೋಟಿ ಪ್ರಮುಖ ಆರೋಪಿಯಾಗಿದ್ದಾರೆ. ಪೋಟಿ ಹಾಗೂ ಶಬರಿಮಲೆಯ ಮಾಜಿ ಆಡಳಿತಾಧಿಕಾರಿ ಬಿ.ಮುರಾರಿ ಬಾಬು ಅವರನ್ನು ಬಂಧಿಸಲಾಗಿದೆ.

ಎಸ್‌ಐಟಿ ತನಿಖೆ ತೃಪ್ತಿ ತಂದಿದೆ:

‘ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯು ಸಂಪೂರ್ಣ ತೃಪ್ತಿ ತಂದಿದ್ದು, ನಾಪತ್ತೆಯಾಗಿರುವ ಅಮೂಲ್ಯ ಚಿನ್ನವನ್ನು ಮರಳಿ ಪಡೆಯುವ ಜತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ಭರವಸೆ ಇದೆ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಪಿ.ಎಸ್‌. ಪ್ರಶಾಂತ್‌ ಶುಕ್ರವಾರ ಹೇಳಿದ್ದಾರೆ.

ಬಳ್ಳಾರಿಯಲ್ಲಿ ತನಿಖೆ?

ಬಳ್ಳಾರಿ: ‘ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಪಿ ದರ್ಜೆಯ ಅಧಿಕಾರಿಯ ನೇತೃತ್ವದ ಕೇರಳ ಸಿಸಿಬಿ ಪೊಲೀಸ್ ತಂಡವು ಶುಕ್ರವಾರ ಬಳ್ಳಾರಿಗೆ ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ.

‘ತಿರುವನಂತಪುರದಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 3700/25ಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಬಳ್ಳಾರಿಗೆ ಬಂದಿರುವ ಮಾಹಿತಿ ಇದೆ. ಈ ವಿಷಯ ಖಚಿತವಾಗಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

ಬಳ್ಳಾರಿ–ಬೆಂಗಳೂರು ರಸ್ತೆಯ ಚಿನ್ನದಂಗಡಿಯೊಂದರಲ್ಲಿ ಕೇರಳ ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದರು ಎನ್ನಲಾಗಿದೆ. ಬೆಳಿಗ್ಗೆ ಬಾಗಿಲು ತೆರೆದಿದ್ದ ಅಂಗಡಿ ಮಾಲೀಕರು, ಮಧ್ಯಾಹ್ನ ದಿಢೀರ್‌ ಬಾಗಿಲು ಬಂದ್‌ ಮಾಡಿದರು ಎಂದು ಗೊತ್ತಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ.