ಕೇರಳ: ಶಬರಿಮಲೆಯ ಅಯ್ಯಪ್ಪನ ದರ್ಶನ ಮಾಡಲು ಮಹಿಳೆಯರಿಗೆ ಅವಕಾಶ ಸಿಗುತ್ತಿದ್ದಂತೆ, ಈಗ ಕೇರಳ ಸರ್ಕಾರ ದೇವಸ್ಥಾನದ ಬಾಗಿಲನ್ನು ವರ್ಷಪೂರ್ತಿ ತೆರೆಯುವ ಸಾಧ್ಯತೆ ಬಗ್ಗೆ ಗಮನ ಹರಿಸಿದೆ.
ಸದ್ಯ ಈ ದೇವಸ್ಥಾನ ವರ್ಷದಲ್ಲಿ ಎರಡು ತಿಂಗಳ ಮಾತ್ರ ತೆರದಿರುತ್ತದೆ. ಸುಪ್ರೀಂಕೋರ್ಟ್ ಮಹಿಳೆಯರಪ್ರವೇಶಕ್ಕೂ ಅವಕಾಶ ಕಲ್ಪಿಸಿದ್ದರಿಂದ ಆದೇಶದ ನಂತರ ಭಕ್ತರ ಸಂಖ್ಯೆ ಹೆಚ್ಚಾಗಬಹುದು. ಹೀಗಾಗಿ ವರ್ಷದ ಎಲ್ಲಾ ದಿನಗಳಲ್ಲೂ ದೇವರ ದರ್ಶನ ಸಿಗುವ ಅವಕಾಶ ಕಲ್ಪಿಸಬಹುದು ಎಂದು ಕೇರಳದ ಮುಜರಾಯಿ ಸಚಿವ ಕಾಡಕಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ.
ಮಹಿಳೆಯರೂ ಹೆಚ್ಚಿನಪ್ರಮಾಣದಲ್ಲಿ ಅಯ್ಯಪ್ಪನ ದರ್ಶನಕ್ಕೆ ಬರುವ ಸಾಧ್ಯತೆ ಇರುವುದರಿಂದ ಒಟ್ಟಾರೆ ಭಕ್ತರ ಸಂಖ್ಯೆಯಲ್ಲಿ ಶೇ 30ರಿಂದ 40ರಷ್ಟು ಏರಿಕೆಯಾಗುವಸಂಭವವಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ತಿಳಿಸಿದೆ.
ದೇವಸ್ಥಾನದ ಬಾಗಿಲನ್ನು ವರ್ಷ ಇಡೀ ತೆರೆದಿರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಅವರು ಈ ಹಿಂದೆ ಮಂಡಳಿಗೆ ಸಲಹೆ ನೀಡಿದ್ದರು.ಆದರೆ, ಆಗ ಅವರ ಸಲಹೆಯನ್ನು ಮಂಡಳಿ ನಿರಾಕರಿಸಿತ್ತು. ‘ಅದು ಅಸಾಧ್ಯದ ಸಂಗತಿ. ಶಬರಿಮಲೆಯ ಆಚಾರ, ಸಂಪ್ರದಾಯಗಳನ್ನು ಪಾಲಿಸಿ ದೇವರ ಹಿತ ಅನುಸರಿಸಿ ಬಾಗಿಲು ತೆರೆಯಲಷ್ಟೇ ಸಾಧ್ಯ. ಅಯ್ಯಪ್ಪನ ಪ್ರತಿಷ್ಠೆ ಇರುವುದು ಧ್ಯಾನ ರೂಪದಲ್ಲಿ. ಆ ಧ್ಯಾನಕ್ಕೆ ಅಡ್ಡಿ ಬರುವಂತೆ ಪ್ರತೀ ದಿನ ಬಾಗಿಲು ತೆರೆದು ದರ್ಶನ ನೀಡುವುದು ಪ್ರಾಯೋಗಿಕವಲ್ಲ’ ಎಂದು ಟಿಡಿಬಿಅಧ್ಯಕ್ಷ ಪ್ರಯಾರ್ ಗೋಪಾಲಕೃಷ್ಣನ್ ಹೇಳಿದ್ದರು.
ಸೌಲಭ್ಯಕ್ಕೆ ಜಾಗದ ನಿರ್ಬಂಧ:ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಹೆಚ್ಚಿನ ರೀತಿಯಲ್ಲಿ ಸೌಲಭ್ಯ ಕಲ್ಪಿಸಲು ಮಂಡಳಿ ಹೆಚ್ಚು ಜಾಗವನ್ನು ಬಳಸಿಕೊಳ್ಳಲು ನಿರ್ಬಂಧವಿದೆ. ಪರಿಯಾರ್ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಈ ದೇವಸ್ಥಾನವಿರುವುದರಿಂದ ಅರಣ್ಯದ ಜಾಗವನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರದ ಅನುಮತಿ ಬೇಕಿದೆ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.