ADVERTISEMENT

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಎಲ್‌ಡಿಎಫ್‌ ಸ್ಪಷ್ಟನೆ ಕೋರಿದ ಕಾಂಗ್ರೆಸ್

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಷಯ: ಮತ್ತೆ ಚರ್ಚೆ

ಪಿಟಿಐ
Published 15 ಫೆಬ್ರುವರಿ 2026, 13:14 IST
Last Updated 15 ಫೆಬ್ರುವರಿ 2026, 13:14 IST
ಶಬರಿಮಲೆ ದೇವಸ್ಥಾನ
ಶಬರಿಮಲೆ ದೇವಸ್ಥಾನ   

ತಿರುವನಂತಪುರ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿಷಯ ಕೆಲ ಸಮಯದ ಬಿಡುವಿನ ಬಳಿಕ ಮತ್ತೆ ಮುನ್ನೆಲೆಗೆ ಬಂದಿದ್ದು, ಕೇರಳದಲ್ಲಿ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.

ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಎಲ್‌ಡಿಎಫ್‌ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ವಿರೋಧ ಪಕ್ಷಗಳು ಭಾನುವಾರ ಒತ್ತಾಯಿಸಿವೆ. 

ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ 2018ರಲ್ಲಿ ನೀಡಿದ್ದ ತೀರ್ಪಿನ ಮರು ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಇದರ ನಡುವೆಯೇ ಈ ವಿಷಯ ಮುನ್ನೆಲೆಗೆ ಬಂದಿದ್ದು, ಆಡಳಿತಾರೂಢ ಸಿಪಿಎಂ ಮತ್ತು ಕಾಂಗ್ರೆಸ್‌ ನಾಯಕರ ನಡುವೆ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ.

ADVERTISEMENT

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸುಪ್ರೀಂ ಕೋರ್ಟ್ ಮುಂದೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಕಾಂಗ್ರೆಸ್‌ ಒತ್ತಾಯಿಸಿದೆ. ಆದರೆ, ಸರ್ಕಾರವು ನ್ಯಾಯಾಲಯದಲ್ಲಿ ಏನು ಹೇಳುತ್ತದೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸಿಪಿಎಂ ಹೇಳಿದೆ.

ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ‘ಶಬರಿಮಲೆಗೆ ಮಹಿಳೆಯರ ಪ್ರವೇಶ ಪ್ರಕರಣದಲ್ಲಿ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ಗೆ ಬದ್ಧವಾಗಿರುವುದೇ ಅಥವಾ ಅದನ್ನು ಹಿಂತೆಗೆದುಕೊಳ್ಳುತ್ತದೆಯೇ ಎಂಬುದನ್ನು ವಿಜಯನ್ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

ಸುಪ್ರೀಂ ಕೋರ್ಟ್ ಸೋಮವಾರ ರಿಟ್ ಅರ್ಜಿಗಳನ್ನು ಪರಿಗಣಿಸಲಿರುವ ಹಿನ್ನೆಲೆಯಲ್ಲಿ, ಸರ್ಕಾರ ಇನ್ನೂ ಮಹಿಳೆಯರ ಪ್ರವೇಶವನ್ನು ಬೆಂಬಲಿಸುತ್ತದೆಯೇ ಎಂದು ಸತೀಶನ್ ಪ್ರಶ್ನಿಸಿದರು. ಎಲ್‌ಡಿಎಫ್‌ ಸರ್ಕಾರ ಈ ವಿಷಯದ ಬಗ್ಗೆ ‘ಗೊಂದಲಕಾರಿ ನಿಲುವು’ ಅಳವಡಿಸಿಕೊಂಡಿದೆ ಎಂದು ಆರೋಪಿಸಿದರು.

‘ಸರ್ಕಾರವು ಮಹಿಳೆಯರ ಪ್ರವೇಶವನ್ನು ಬೆಂಬಲಿಸುವುದನ್ನು ಮುಂದುವರಿಸಿದರೆ, ಅದು ತನ್ನ ಅಫಿಡವಿಟ್‌ಗೆ ದೃಢವಾಗಿ ನಿಲ್ಲಬೇಕು. ಮಹಿಳೆಯರ ಪ್ರವೇಶವನ್ನು ಬೆಂಬಲಿಸದಿದ್ದರೆ, ಅಫಿಡವಿಟ್ ಹಿಂಪಡೆಯಬೇಕು. ಒಟ್ಟಿನಲ್ಲಿ ಈ ವಿಷಯದಲ್ಲಿ ಸ್ಪಷ್ಟ ನಿಲುವು ಇರಬೇಕು’ ಎಂದರು. 

10 ವರ್ಷದ ಬಾಲಕಿಯರಿಂದ ಹಿಡಿದು 50ರ ವಯೋಮಾನದ ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸುವುದರ ಮೇಲಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್‌ 2018ರಲ್ಲಿ ತೆಗೆದುಹಾಕಿತ್ತು. ಈ ತೀರ್ಪಿನ ಹಿನ್ನೆಲೆಯಲ್ಲಿ ಎಲ್ಲ ವಯೋಮಾನದ ಮಹಿಳೆಯರಿಗೆ ದೇಗುವ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟದ್ದಕ್ಕಾಗಿ ಎಲ್‌ಡಿಎಫ್ ಸರ್ಕಾರವು ಈ ಹಿಂದೆ ಅಯ್ಯಪ್ಪ ಭಕ್ತರ ಒಂದು ವರ್ಗ ಮತ್ತು ಸಂಘ ಪರಿವಾರದಿಂದ ತೀವ್ರ ಟೀಕೆ ಎದುರಿಸಿತ್ತು.

‘ನಿಲುವು ನ್ಯಾಯಾಲಯಕ್ಕೆ ತಿಳಿಸುತ್ತೇವೆ’

ವಿರೋಧ ಪಕ್ಷದ ಟೀಕೆಗೆ ಪ್ರತಿಕ್ರಿಯಿಸಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ‘ಸರ್ಕಾರವು ನ್ಯಾಯಾಲಯದ ಮುಂದೆ ತನ್ನ ನಿಲುವು ತಿಳಿಸುತ್ತದೆ. ಈ ವಿಷಯದಲ್ಲಿ ಯಾರೂ ಕಳವಳಪಡುವ ಅಗತ್ಯವಿಲ್ಲ’ ಎಂದು ಹೇಳಿದರು. ‘ಪ್ರಜಾಪ್ರಭುತ್ವದ ಘನತೆ ಮತ್ತು ಭಕ್ತರ ಹಿತಾಸಕ್ತಿಗಳನ್ನು ಎತ್ತಿಹಿಡಿಯಬೇಕು’ ಎಂದು ತಿಳಿಸಿದರು. ಆದರೆ ಸರ್ಕಾರವು ನ್ಯಾಯಾಲಯದ ಮುಂದೆ ವ್ಯಕ್ತಪಡಿಸುವ ನಿಲುವು ಏನು ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು. ಮಹಿಳೆಯರ ಪ್ರವೇಶ ವಿಷಯದಲ್ಲಿ ಸಿಪಿಎಂ ತನ್ನ ನಿಲುವು ಬದಲಾಯಿಸಲಿದೆಯೇ ಎಂದು ಕೇಳಿದಾಗ ‘ಬದಲಾಯಿಸಲಾಗದ್ದು ಯಾವುದೂ ಇಲ್ಲ’ ಎಂದು ಪ್ರತಿಕ್ರಿಯಿಸಿದರು. ಆದರೆ ಸ್ಪಷ್ಟ ಉತ್ತರ ನೀಡುವುದರಿಂದ ನುಣುಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.