ADVERTISEMENT

ರಾಜಸ್ಥಾನ ರಾಜಕಾರಣ: ಅಶೋಕ್ ಗೆಹ್ಲೋಟ್ ಭೇಟಿಯಾದ ಸಚಿನ್ ಪೈಲಟ್

ಏಜೆನ್ಸೀಸ್
Published 13 ಆಗಸ್ಟ್ 2020, 12:55 IST
Last Updated 13 ಆಗಸ್ಟ್ 2020, 12:55 IST
ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್
ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್   

ಜೈಪುರ: ರಾಜಸ್ಥಾನ ರಾಜಕಾರಣದಲ್ಲಿ ಗುರುವಾರ ಕ್ಷಿಪ್ರಗತಿಯಲ್ಲಿ ಬೆಳವಣಿಗೆಗಳು ನಡೆದವು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಅವರ ನಿವಾಸದಲ್ಲಿ ಬಂಡಾಯವೆದ್ದಿದ್ದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಭೇಟಿಯಾದರು.

ಸುಮಾರು ಒಂದು ತಿಂಗಳ ಹಿಂದೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ 18 ಶಾಸಕರೊಂದಿಗೆ ಸಚಿನ್ ಪೈಲಟ್ ಬಹಿರಂಗವಾಗಿಯೇ ಬಂಡಾಯವೆದ್ದಿದ್ದರು. ಇದು ಹಲವು ಲೆಕ್ಕಾಚಾರಗಳನ್ನು ಹುಟ್ಟುಹಾಕಿತ್ತಲ್ಲದೇ, ಸರ್ಕಾರ ಉರುಳುವ ಸನ್ನಿವೇಶವೂ ಎದುರಾಗಿತ್ತು. ಹೈಕಮಾಂಡ್ ಮಧ್ಯಪ್ರವೇಶದ ನಂತರ ಇದೀಗ ಪರಿಸ್ಥಿತಿ ತಿಳಿಗೊಂಡಿದೆ. ಇದರ ಕುರುಹಾಗಿಯೇ ಪೈಲಟ್-ಗೆಹ್ಲೋಟ್ ಭೇಟಿಯನ್ನು ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಮೌನವಾಗಿದ್ದ ಅಶೋಕ್‌ ಗೆಹ್ಲೋಟ್ ಗುರುವಾರ ಬೆಳಗ್ಗೆ ‘ಎಲ್ಲವನ್ನೂ ಮರೆಯುವುದು ಮತ್ತು ಕ್ಷಮಿಸಿ ಮುಂದೆ ಸಾಗಬೇಕು’ ಎಂದು ಟ್ವೀಟ್‌ ಮಾಡುವ ಮೂಲಕ ಮೌನ ಮುರಿದಿದ್ದಾರೆ. ಕಳೆದೊಂದು ತಿಂಗಳಿಂದ ಕಠಿಣ ಪದಗಳ ಮೂಲಕ ವಾಗ್ದಾಳಿ ನಡೆಸಿದ್ದ ಉಭಯನಾಯಕರು ಸಂಜೆ ಭೇಟಿಯಾದರು.

ADVERTISEMENT

ಜೈಸಲ್ಮೇರ್‌ನ ರೆಸಾರ್ಟ್‌ನಲ್ಲಿ ನಡೆದಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಪೈಲಟ್‌ ಸೇರಿದಂತೆ ಎಲ್ಲಬಂಡಾಯ ಶಾಸಕರು ಭಾಗವಹಿಸಿದ್ದಾರೆ.

ಸಚಿನ್ ಪೈಲಟ್ ಅವರು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಳೆದ ಸೋಮವಾರ ಭೇಟಿ ಮಾಡುವುದರೊಂದಿಗೆ ಬಿಕ್ಕಟ್ಟು ಶಮನವಾಗಿದೆ. ಪಕ್ಷ ಮತ್ತು ರಾಜಸ್ಥಾನ ಸರ್ಕಾರದ ಹಿತಾಸಕ್ತಿಯ ಪರ ಕೆಲಸ ಮಾಡುವುದಾಗಿ ಪೈಲಟ್ ಮಾತು ಕೊಟ್ಟಿದ್ದಾರೆ ಹಾಗೇ ಪೈಲಟ್‌ ಬಣದ ಬೇಡಿಕೆಗಳನ್ನು ಹೈಕಮಾಂಡ್‌ ಪರಿಹರಿಸಲಿದೆ ಎಂದು ಹೇಳಲಾಗಿದೆ.

ಪೈಲಟ್ ಮತ್ತು ಅವರ ಜತೆಗಿರುವ ಶಾಸಕರ ದೂರುಗಳ ಬಗ್ಗೆ ಗಮನ ಹರಿಸುವುದಕ್ಕಾಗಿ ಮೂವರು ಸದಸ್ಯರ ಸಮಿತಿ ರಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿದ್ದ ಪೈಲಟ್ ಅವರು ಗೆಹ್ಲೋಟ್ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಜುಲೈ 13ರಿಂದ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಪೈಲಟ್ ಮತ್ತು ಅವರ ಜತೆಗೆ ಗುರುತಿಸಿಕೊಂಡಿದ್ದ ಇಬ್ಬರು ಸಚಿವರನ್ನು ಜುಲೈ 14ರಂದು ವಜಾ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.