ಲಖನೌ: ದೇವಸ್ಥಾನಗಳನ್ನು ಅಪವಿತ್ರಗೊಳಿಸುತ್ತಿರುವುದರ ವಿರುದ್ಧ ಪ್ರತಿಭಟನೆಯಾಗಿ ಮಸೀದಿಗಳಲ್ಲಿ ‘ಹವನ’ ನಡೆಸುವುದಾಗಿ ಹಿಂದೂಪರ ಹೋರಾಟಗಾರ್ತಿ ಸಾದ್ವಿ ಪ್ರಾಚಿ ಶನಿವಾರ ಎಚ್ಚರಿಕೆ ನೀಡಿದ್ದಾರೆ.
ದೇವಸ್ಥಾನಗಳಲ್ಲಿ ನಮಾಜ್‌ಗೆ ಬೆಂಬಲ ನೀಡುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ ಸಾದ್ವಿ ಪ್ರಾಚಿ, ದೇಶದಲ್ಲಿರುವ ಹೆಚ್ಚಿನ ಮಸೀದಿಗಳನ್ನು ದೇವಸ್ಥಾನಗಳನ್ನು ಧ್ವಂಸ ಮಾಡಿ ಅದರ ಮೇಲೆಯೇ ನಿರ್ಮಾಣ ಮಾಡಲಾಗಿದೆ. ಲಖನೌನ ಅತ್ಯಂತ ಹಳೆಯ ಮಸೀದಿಯೊಂದರಲ್ಲಿ ನಾನು ಹವನ ನಡೆಸುತ್ತೇನೆ. ಮಾಲಿನ್ಯವನ್ನು ನಿಯಂತ್ರಿಸಲೂ ಇದು ಸಹಕಾರಿಯಾಗಲಿದೆ’ ಎಂದಿದ್ದಾರೆ.
ಲವ್ ಜಿಹಾದ್ ವಿರುದ್ಧ ಅತ್ಯಂತ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಪ್ರಾಚಿ, ‘ಲವ್ ಜಿಹಾದ್‌ನಲ್ಲಿ ತೊಡಗಿಸಿಕೊಂಡವರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು’ ಎಂದಿದ್ದಾರೆ. ಸಾದ್ವಿ ಪ್ರಾಚಿ ಅವರ ಹೇಳಿಕೆಗೆ ಸಂತರು ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಕೋಮು ವಾತಾವರಣವನ್ನು ಕೆಡಿಸುವ ಯಾವುದೇ ಹೇಳಿಕೆಯನ್ನು ನೀಡಬಾರದು ಎಂದು ಹೇಳಿದ್ದಾರೆ. ‘ಕಾನೂನು ಉಲ್ಲಂಘಿಸಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಇಂಥ ಹೇಳಿಕೆಗಳನ್ನು ನೀಡುವುದನ್ನು ಅವರು ಬಿಡಬೇಕು’ ಎಂದು ಅಯೋಧ್ಯೆಯ ರಾಮಮಂದಿರದ ಮುಖ್ಯ ಅರ್ಚಕರಾದ ಸತ್ಯೇಂದ್ರ ದಾಸ್ ಹೇಳಿದರು.
ಲವ್ ಜಿಹಾದ್ ವಿರುದ್ಧ ಇತ್ತೀಚೆಗೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಈ ಕೃತ್ಯದಲ್ಲಿ ತೊಡಗಿಸಿಕೊಂಡವರು ‘ರಾಮ ನಾಮ್ ಸತ್ಯ್’ಕ್ಕೆ(ಅಂತ್ಯಕ್ರಿಯೆಗೆ ಕೊಂಡೊಯ್ಯುವ ವೇಳೆ ಹೇಳುವ ವಾಕ್ಯ) ಸಿದ್ಧರಾಗಿರಬೇಕು’ ಎಂದು ಎಚ್ಚರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.