ADVERTISEMENT

ಹೆದ್ದಾರಿಯ ಮೇಲೆ ಮುಸ್ಲಿಂ ವಿರೋಧಿ ಬರಹ: ಬಲಪಂಥೀಯ ಸಂಘಟನೆ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 14:40 IST
Last Updated 28 ಫೆಬ್ರುವರಿ 2026, 14:40 IST
   

ಲಖನೌ: ದೆಹಲಿ–ದೆಹ್ರಾಡೂನ್‌ ರಾಷ್ಟ್ರೀಯ ಹೆದ್ದಾರಿಯ ಮೇಲೆ ‘ಈ ರಸ್ತೆ ಮುಸ್ಲಿಮರಿಗಲ್ಲ’ ಎಂಬ ದ್ವೇಷಪೂರಿತ ಬರಹ ಬರೆದಿದ್ದ ಪ್ರಕರಣ ಸಂಬಂಧ ಬಲಪಂಥೀಯ ಸಂಘಟನೆಯೊಂದರ ಮೇಲೆ ಉತ್ತರ ಪ್ರದೇಶದ ಸಹಾರನಪುರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ಕೋಮು ವೈಷಮ್ಯಕ್ಕೆ ಕಾರಣವಾಗುವ ಬರಹ ಇದ್ದ ಬಗ್ಗೆ ಶುಕ್ರವಾರ ಮಾಹಿತಿ ಲಭ್ಯವಾಗಿದ್ದು, ಸದ್ಯ ಇದನ್ನು ಅಳಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಪ್ರೇ ಪೇಯಿಂಟ್‌ ಬಳಸಿ ಇಬ್ಬರು ಮಹಿಳೆಯರು ಬರಹ ಬರೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಉತ್ತರಾಖಂಡ ರಾಜ್ಯದ ನೋಂದಣಿ ಸಂಖ್ಯೆ ಹೊಂದಿರುವ ಕಾರು ಹಾಗೂ ಮಹಿಳೆ ಸೇರಿದಂತೆ ಕೆಲವರು ‘ಜೈ ಶ್ರೀ ರಾಮ್‌’ ಎಂದು ಪಠಿಸುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.

ADVERTISEMENT

ಬಿಎನ್‌ಎಸ್‌ನ ಸೆಕ್ಷನ್‌ 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಡಿಯೊದ ವಿಶ್ವಾಸಾರ್ಹತೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಭದ್ರತೆ ಮತ್ತು ಗಸ್ತು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗಾಜಿಯಾಬಾದ್‌ನ ಹಿಂದೂ ರಕ್ಷಾ ದಳದ ನಾಯಕ ಭೂಪೇಂದ್ರ ಚೌದರಿ ಅಲಿಯಾಸ್‌ ಪಿಂಕಿ ಭಯ್ಯಾ ಅವರು ತಮ್ಮ ಸಂಘಟನೆಯ ಸದಸ್ಯರೇ ಈ ಬರಹ ಬರೆದಿದ್ದಾರೆ ಎಂದು ಖಚಿತಪಡಿಸಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮ ಪೋಸ್ಟ್‌ವೊಂದರಲ್ಲಿ ಅವರು, ‘ಹಿಂದೂಗಳ ತೆರಿಗೆ ಹಣದಿಂದ ರಸ್ತೆ ನಿರ್ಮಿಸಲಾಗಿದೆ. ಹೀಗಾಗಿ ಅವರು ಬರೆದ ಬರಹ ಸರಿಯಾಗಿದೆ’ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.