ADVERTISEMENT

ಸೈಫ್ ಮೇಲಿನ ದಾಳಿಕೋರ ತವರು ಬಾಂಗ್ಲಾದೇಶಕ್ಕೆ ಪರಾರಿಯಾಗಲು ಯೋಚಿಸಿದ್ದ: ಪೊಲೀಸ್

ಪಿಟಿಐ
Published 20 ಜನವರಿ 2025, 14:28 IST
Last Updated 20 ಜನವರಿ 2025, 14:28 IST
<div class="paragraphs"><p>ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಹಾಗೂ&nbsp;ದಾಳಿಕೋರ ಶರೀಫುಲ್‌ ಇಸ್ಲಾಮ್‌ ಶೆಹಜಾದ್‌ ಮೊಹಮ್ಮದ್‌ ರೊಹಿಲ್ಲಾ ಅಮಿನ್‌ ಫಕೀರ್‌</p></div>

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಹಾಗೂ ದಾಳಿಕೋರ ಶರೀಫುಲ್‌ ಇಸ್ಲಾಮ್‌ ಶೆಹಜಾದ್‌ ಮೊಹಮ್ಮದ್‌ ರೊಹಿಲ್ಲಾ ಅಮಿನ್‌ ಫಕೀರ್‌

   

ಮುಂಬೈ: ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರಿಗೆ ಅವರದ್ದೇ ಮನೆಯಲ್ಲಿ ಚಾಕುವಿನಿಂದ ಇರಿದಿದ್ದ ದಾಳಿಕೋರ, ಸುದ್ದಿ ವಾಹಿನಿಗಳಲ್ಲಿ ತನ್ನ ಫೋಟೊ ಪ್ರಸಾರವಾಗುತ್ತಿರುವುದನ್ನು ಕಂಡು ಕಂಗಾಲಾಗಿದ್ದ. ಅದರಂತೆ, ತನ್ನ ತವರು ಬಾಂಗ್ಲಾದೇಶಕ್ಕೆ ಪರಾರಿಯಾಗಲು ಯೋಜಿಸಿದ್ದ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ದಾಳಿಕೋರನನ್ನು ಶರೀಫುಲ್‌ ಇಸ್ಲಾಮ್‌ ಶೆಹಜಾದ್‌ ಮೊಹಮ್ಮದ್‌ ರೊಹಿಲ್ಲಾ ಅಮಿನ್‌ ಫಕೀರ್‌ ಎಂದು ಗುರುತಿಸಿರುವ ಪೊಲೀಸರು, ಆತ ಬಾಂಗ್ಲಾದೇಶದವನು ಎಂಬುದನ್ನು ಖಚಿತಪಡಿಸಿದ್ದಾರೆ. ಬಾಂಗ್ಲಾದ ಝಲೊಕತಿ ನಿವಾಸಿಯಾಗಿರುವ ಶರೀಫುಲ್‌, ಐದು ತಿಂಗಳಿನಿಂದ ಮುಂಬೈನಲ್ಲಿ ನೆಲೆಸಿದ್ದ.

ADVERTISEMENT

ಶರೀಫುಲ್‌, ಮುಂಬೈನ ಬಾಂದ್ರಾದಲ್ಲಿರುವ ಸೈಫ್‌ ಅವರ ಮನೆಗೆ ಜನವರಿ 16ರಂದು ಮುಂಜಾನೆ ನುಗ್ಗಿದ್ದ. ಮನೆಗೆಲಸದಾಕೆ ಎಲಿಯಾಮಾ ಫಿಲಿಪ್ಸ್‌ ಅವರು ಆತನನ್ನು ಕಂಡು ಚೀರಿದ್ದರು. ಕೂಡಲೇ ಸ್ಥಳಕ್ಕೆ ಬಂದ, ಸೈಫ್‌ ಮತ್ತು ಆತನ ನಡುವೆ ಹೊಡೆದಾಟವಾಗಿತ್ತು. ಆಗ ಆತ ಚಾಕುವಿನಿಂದ ಸೈಫ್‌ ಮೇಲೆ ದಾಳಿ ಮಾಡಿದ್ದ. ರಕ್ಷಣೆಗೆ ಧಾವಿಸಿದ ಎಲಿಯಾಮಾ ಮತ್ತು ಗೀತಾ ಎಂಬ ಇನ್ನೊಬ್ಬ ಸಿಬ್ಬಂದಿಗೂ ಗಾಯವಾಗಿತ್ತು.

ಬಳಿಕ ಪರಾರಿಯಾಗಿದ್ದ ಶರೀಫುಲ್‌ನನ್ನು ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಆತನಿಗಾಗಿ ಬಲೆ ಬೀಸಿದ್ದ ಮುಂಬೈ ಪೊಲೀಸರು 30 ತಂಡಗಳನ್ನು ರಚಿಸಿದ್ದರು. ವಿವಿಧ ಸ್ಥಳಗಳಲ್ಲಿ ಆತ ಸಂಚರಿಸಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು.

'ತನ್ನ ಫೋಟೊಗಳು ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ಕಂಡು ಆತಂಕಕ್ಕೊಳಗಾಗಿದ್ದ ಶರೀಫುಲ್‌, ಬಾಂಗ್ಲಾದೇಶಕ್ಕೆ ವಾಪಸ್‌ ಹೋಗಿಬಿಡಬೇಕು ಎಂದು ಯೋಚಿಸಿದ್ದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯ ಭಾಗವಾಗಿ, ಘಟನಾ ಸ್ಥಳದಲ್ಲಿ ಕಂಡುಬಂದಿರುವ ಬೆರಳಚ್ಚು, ಆರೋಪಿಯ ಬೆರಳಚ್ಚಿಗೂ ಹೋಲಿಕೆ ಇದೆಯೇ ಎಂಬುದನ್ನು ಪರೀಕ್ಷಿಸಲಾಗುವುದು ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.