ADVERTISEMENT

ಸಿಖ್ ವಿರೋಧಿ ಗಲಭೆ: ಹೇಳಿಕೆ ದಾಖಲಿಸಿದ ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನ್‌ ಕುಮಾರ್‌

ಪಿಟಿಐ
Published 7 ಜುಲೈ 2025, 14:45 IST
Last Updated 7 ಜುಲೈ 2025, 14:45 IST
ಸಜ್ಜನ್‌ ಕುಮಾರ್‌
ಸಜ್ಜನ್‌ ಕುಮಾರ್‌   

ನವದೆಹಲಿ: 1984ರ ಸಿಖ್ ವಿರೋಧಿ ಗಲಭೆ ಸಂದರ್ಭದಲ್ಲಿ ದೆಹಲಿಯ ಜನಕಪುರಿ ಮತ್ತು ವಿಕಾಸಪುರಿ ಪ್ರದೇಶಗಳಲ್ಲಿ ನಡೆದ ಹಿಂಸಾಚಾರ ಸಂಬಂಧ ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನ್‌ ಕುಮಾರ್ ಅವರ ಹೇಳಿಕೆಯನ್ನು ದೆಹಲಿಯ ನ್ಯಾಯಾಲಯವು ಸೋಮವಾರ ದಾಖಲಿಸಿಕೊಂಡಿತು.

ವಿಶೇಷ ನ್ಯಾಯಾಧೀಶ ದಿಗ್ವಿನಯ್‌ ಸಿಂಗ್‌ ಅವರು ಸಜ್ಜನ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡರು.

ಸಜ್ಜನ್ ಕುಮಾರ್‌ ಅವರು, ‘ನಾನು ನಿರಪರಾಧಿ, ನನ್ನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ. ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಯುತ್ತಿಲ್ಲ. ಆಧಾರರಹಿತ ಆರೋಪಗಳನ್ನು ಮಾಡಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಸಾಕ್ಷಿಗಳು ನನ್ನ ಹೆಸರನ್ನು ಉಲ್ಲೇಖಿಸಿರಲಿಲ್ಲ. ದಶಕಗಳ ನಂತರ ನನ್ನ ಹೆಸರನ್ನು ಎಳೆದು ತರಲಾಗಿದೆ. ನನ್ನ ವಿರುದ್ಧದ ಪ್ರಕರಣವು ಸುಳ್ಳು ಮತ್ತು ರಾಜಕೀಯ ಪ್ರೇರಿತ. ಘಟನೆ ಸಂದರ್ಭದಲ್ಲಿ ನಾನು ರಕ್ತದಾನ ಶಿಬಿರ ಮತ್ತು ಶಾಂತಿಯುತ ಮೆರವಣಿಗೆ ಆಯೋಜಿಸಿದ್ದೆ’ ಎಂದೂ ತಿಳಿಸಿದರು.

ನಂತರ ನ್ಯಾಯಾಲಯವು ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿತು.

ಸಿಖ್‌ ವಿರೋಧಿ ಗಲಭೆಯಲ್ಲಿ ನಡೆದ ಹಿಂಸಾಚಾರದ ವಿರುದ್ಧ ದಾಖಲಾದ ದೂರುಗಳ ಆಧಾರದಲ್ಲಿ ಸಜ್ಜನ್‌ ಅವರ ವಿರುದ್ಧ ವಿಶೇಷ ತನಿಖಾ ತಂಡವು 2015 ಫೆಬ್ರುವರಿಯಲ್ಲಿ ಎರಡು ಎಫ್‌ಐಆರ್‌ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.