ಪಾಡ್‌ಕಾಸ್ಟರ್ ರಣವೀರ್ ಅಲಹಾಬಾದಿಯಾ ಮತ್ತು ಕಾಮಿಡಿಯನ್ ಸಮಯ್ ರೈನಾ
Credit: Youtube/SamayRaina
ಮುಂಬೈ: ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಆಡಿದ ಅಶ್ಲೀಲ ಮಾತುಗಳ ಸಂಬಂಧ ಫೆ.18ರಂದು (ಮಂಗಳವಾರ) ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಕಾಮಿಡಿಯನ್ ಸಮಯ್ ರೈನಾಗೆ ಮಹಾರಾಷ್ಟ್ರ ಸೈಬರ್ ವಿಭಾಗದ ಅಧಿಕಾರಿಗಳು ಸೂಚಿಸಿದ್ದಾರೆ.
‘ನಾನು ಅಮೆರಿಕದಲ್ಲಿರುವ ಕಾರಣ ವಿಡಿಯೊ ಕಾನ್ಫರೆನ್ಸ್ ಮೂಲಕ ಹೇಳಿಕೆ ದಾಖಲಿಸಲು ಅವಕಾಶ ನೀಡುವಂತೆ ಸಮಯ್ ರೈನಾ ಮನವಿ ಮಾಡಿದ್ದರು. ಆದರೆ, ಮಹಾರಾಷ್ಟ್ರ ಸೈಬರ್ ವಿಭಾಗದ ಅಧಿಕಾರಿಗಳು ಮನವಿಯನ್ನು ತಿರಸ್ಕರಿಸಿದ್ದಾರೆ’ ಎಂದು ವರದಿಯಾಗಿದೆ.
‘ಆಶ್ಲೀಲ ಮಾತಿನ ಕುರಿತು ಹೇಳಿಕೆ ದಾಖಲಿಸಲು ಖಾರ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ಪಾಡ್‌ಕಾಸ್ಟರ್ ರಣವೀರ್ ಅಲಹಾಬಾದಿಯಾಗೆ ಮುಂಬೈ ಪೊಲೀಸರು ಸೂಚನೆ ನೀಡಿದ್ದರು. ಮೂರು ದಿನಗಳಿಂದ ಹಾಜರಾಗದ ಕಾರಣ ಅವರ ಫ್ಲ್ಯಾಟ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಆಗ ಬಾಗಿಲು ಹಾಕಲಾಗಿತ್ತು. ನಿರಂತರ ಪ್ರಯತ್ನಿಸಿದರೂ ಅವರು ಸಿಗುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈನಾ ಅವರು ವಿದೇಶದಲ್ಲಿದ್ದು, ಹೆಚ್ಚಿನ ಸಮಯ ನೀಡಬೇಕೆಂದು ಅವರ ಪರ ವಕೀಲರು ಮುಂಬೈನ ಪೊಲೀಸರಿಗೆ ಮನವಿ ಮಾಡಿದ್ದರು. ಮನವಿ ಪರಿಗಣಿಸಿದ ಪೊಲೀಸರು ಮಾ.10ರವರೆಗೆ ಸಮಯ ನೀಡಿದ್ದರು.
ರಣವೀರ್ ಅವರ ಅಶ್ಲೀಲ ಹೇಳಿಕೆ ಹಿನ್ನೆಲೆಯಲ್ಲಿ ಜಾಲತಾಣ ವೇದಿಕೆಗಳಲ್ಲಿನ ವಿವಾದಾತ್ಮಕ ಕಂಟೆಂಟ್‌ಗಳನ್ನು ತಡೆಯಲು ಈಗಾಗಲೇ ಇರುವ ಕಾನೂನುಗಳಿಗೆ ತಿದ್ದುಪಡಿಗಳು ಬೇಕಾಗಿವೆಯೇ ಎಂಬುದನ್ನು ಪರಿಶೀಲಿಸಿ ಕೂಡಲೇ ವರದಿ ನೀಡುವಂತೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿಯು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.