ADVERTISEMENT

ಸಂಭಲ್‌: ವರದಿ ಸಲ್ಲಿಕೆಗೆ ಸಮಯ ಕೇಳಿದ ಕೋರ್ಟ್ ಕಮಿಷನರ್‌

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 14:12 IST
Last Updated 9 ಡಿಸೆಂಬರ್ 2024, 14:12 IST
.
.   

ಸಂಭಲ್‌ (ಉತ್ತರ ಪ್ರದೇಶ): ಸಂಭಲ್‌ನಲ್ಲಿರುವ ಶಾಹಿ ಜಮಾ ಮಸೀದಿ ಸಮೀಕ್ಷೆ ಕುರಿತ ವರದಿಯನ್ನು ಕೋರ್ಟ್‌ ಕಮಿಷನರ್‌ ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಅನಾರೋಗ್ಯ ಇರುವ ಕಾರಣ ಇನ್ನೂ 15 ದಿನ ಕಾಲಾವಕಾಶ ನೀಡಬೇಕು ಎಂದು ಅವರು ಕೋರಿದ್ದಾರೆ.

‘ಅರ್ಜಿ ವಿಚಾರಣೆಯನ್ನು ಸಿವಿಲ್‌ ಕೋರ್ಟ್‌ ಮುಂದೂಡುವ ಸಾಧ್ಯತೆ ಇದೆ’ ಎಂದು ಕೋರ್ಟ್‌ ಕಮಿಷನರ್‌ ರಮೇಶ್‌ ಸಿಂಗ್‌ ರಾಘವ್‌ ಸುದ್ದಿಗಾರರಿಗೆ ತಿಳಿಸಿದರು.

‘ವಿಚಾರಣೆ ಮುಂದೂಡಬೇಕೆಂದು ಅರ್ಜಿ ಸಲ್ಲಿಸಿದ್ದೇನೆ. ಸಮೀಕ್ಷಾ ವರದಿಯು ಸಿದ್ಧವಾಗಿದ್ದು, ಅಂತಿಮ ಹಂತದಲ್ಲಿದೆ. ಮುಚ್ಚಿದ ಲಕೋಟೆಯೊಳಗೆ ವರದಿಯ‌ನ್ನು ಸಲ್ಲಿಸಲಾಗುವುದು. ಆದರೆ ಅನಾರೋಗ್ಯ ಕಾರಣದಿಂದ 15 ದಿನ ಕಾಲಾವಕಾಶ ಕೇಳಿದ್ದೇನೆ’ ಎಂದು ಹೇಳಿದರು.

ADVERTISEMENT

‘ಮೂರ್ನಾಲ್ಕು ದಿನಗಳಿಂದ ಜ್ವರ ಇದೆ. ವರದಿಯನ್ನು ವಿಶ್ಲೇಷಿಸಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

ಮೊಘಲ್‌ ರಾಜ ಬಾಬರ್‌ 1526ರಲ್ಲಿ ದೇಗುಲವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎಂಬ ಅರ್ಜಿ ವಿಚಾರಣೆ ನಡೆಸಿದ್ದ ಸ್ಥಳೀಯ ಕೋರ್ಟ್‌, ಕಮಿಷನರ್ ಅವರು ಮಸೀದಿಯ ಸಮೀಕ್ಷೆ ನಡೆಸಬೇಕು ಎಂದು ನವೆಂಬರ್‌ 19ರಂದು ಆದೇಶ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.